ಹುಬ್ಬಳ್ಳಿ ರೈಲ್ವೆ ವಿಭಾಗದಿಂದ ವಿಪತ್ತು ನಿರ್ವಹಣೆ ಅಣಕು ಪ್ರದರ್ಶನ

New Rail New
Published on

ಹುಬ್ಬಳ್ಳಿ : ರೈಲ್ವೆ ಅಪಘಾತದ ವಿಪತ್ತು ನಿರ್ವಹಣೆ ಕುರಿತ ಅಣಕು ಪ್ರದರ್ಶನ ಇಲ್ಲಿನ ರೈಲ್ವೆ ಯಾರ್ಡ್​ನ ಆವರಣದಲ್ಲಿ ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ವತಿಯಿಂದ ಬುಧವಾರ ನಡೆಯಿತು.

ರಾಷ್ಟ್ರೀಯ ವಿಪ್ಪತ್ತು ನಿರ್ವಹಣೆ ಪಡೆ, ರೈಲ್ವೆ ರಕ್ಷಣಾ ಪಡೆ, ರಾಜ್ಯ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಹೋಮ್ ಗಾರ್ಡ್ಸ್, ರೆಡ್ ಕ್ರಾಸ್, ರೈಲ್ವೆ ವೈದ್ಯಕೀಯ ಸಿಬ್ಬಂದಿ ಮತ್ತು ರೈಲ್ವೆ ನಾಗರಿಕ ಸುರಕ್ಷಣಾ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಈ ಅಣಕು ಪ್ರದರ್ಶನವನ್ನು ರೈಲ್ವೆಯ ಅಪಘಾತ ಸಂಭವಿಸಿದಾಗ ಅದರ ನಿರ್ವಹಣೆ ಮತ್ತು ಶೀಘ್ರ ಕಾರ್ಯುಚರಣೆೆಯ ಉದ್ದೇಶದಿಂದ ಆಯೋಜಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಕೃತಕ ರೈಲ್ವೆ ಅಪಘಾತದ ದೃಶ್ಯಾವಳಿ ಸೃಷ್ಟಿಸಲಾಯಿತು. ಈ ದುರಂತದಲ್ಲಿ ಪ್ರಯಾಣಿಕ ರೈಲಿನ ಎರಡು ಬೋಗಿಗಳು ಉರುಳಿದವು ಮತ್ತು ಹಲವಾರಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾದ ದೃಶ್ಯ ಸೃಷ್ಟಿಸಲಾಯಿತು.

ಅಪಘಾತದಲ್ಲಿ ಗಾಯಾಳುಗಳ ನೋವಿನ ಆಕ್ರಂದನ, ಸಾವು ನೋವು ನಡೆದ ಘಟನಾ ಸ್ಥಳಕ್ಕೆ ರಕ್ಷಣಾ ತಂಡ ಧಾವಂತದಿಂದ ಆಗಮಿಸಿ, ಬೋಗಿಯ ಕಿಟಕಿ ಸೀಳುವಿಕೆ, ಪ್ಯಾನಲ್ ಮತ್ತು ಮೇಲ್ಛಾವಣಿಯನ್ನು ಕತ್ತರಿಸಿ ಒಳಗೆ ನುಗ್ಗಿ, ಗಾಯಗೊಂಡವರನ್ನು ಸುರಕ್ಷಿತವಾಗಿ ಹೊರತೆಗೆದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಕೆಲವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು.

ಗಾಯಗೊಂಡವರ ವಿವರಗಳನ್ನು ದಾಖಲಿಸಿ ಅವರ ಸಂಬಂಧಿಕರಿಗೆ ಮಾಹಿತಿ ನೀಡಲು ರೈಲ್ವೆ ಸಹಾಯವಾಣಿ ಸ್ಥಾಪಿಲಾಯಿತು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮತ್ತಿತರ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಈ ಅಣಕು ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು.

ಪ್ರಧಾನ ಮುಖ್ಯ ಸುರಕ್ಷಾ ಅಧಿಕಾರಿ ಎಂ. ರಾಮಕೃಷ್ಣ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಮುಖ್ಯ ಯಾಂತ್ರಿಕ ಇಂಜಿನಿಯರ್ ಪಿ. ಬಾಲಸುಂದರಂ, ವಿಭಾಗೀಯ ವ್ಯವಸ್ಥಾಪಕರಾದ ಟಿ.ವಿ. ಭೂಷಣ ಮತ್ತು ಪ್ರೇಮ್ಂದ್ರ, ಮುಖ್ಯ ವಿಭಾಗೀಯ ಸುರಕ್ಷತಾ ಅಧಿಕಾರಿ ತ್ರಿನೇತ್ರ ಕೆ.ಆರ್, ಹಿರಿಯ ವಿಭಾಗೀಯ ಭದ್ರತಾ ಆಯುಕ್ತ ಅಲೋಕ ಕುಮಾರ ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net