

ಹುಬ್ಬಳ್ಳಿ: ಸಿಂಫೋನಿ ಇನ್‌ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಗಾನ ಸುಧೆ ಜತೆಗೆ ಕೊಳಲು ವಾದನದ ಜುಗಲ್‌ಬಂಧಿ ಹರಿಯಿತು.
ಪಂ. ಪ್ರವೀಣ ಗೋಡ್ಖಿಂಡಿ, ಷಡ್ಜ್ ಗೋಡ್ಖಿಂಡಿ ಅವರ ಕೊಳಲು ವಾದನದ ಜುಗಲ್‌ಬಂಧಿ ಸಂಗೀತ ಪ್ರಿಯರ ಮನಕ್ಕಿಳಿಯಿತು. ಇದಕ್ಕೆ ಇಶಾನ್ ಘೋಷ್ ಅವರ ತಬಲಾ ಸಾಥ್ ಕೂಡ ಕೇಳುಗರ ತಲೆದೂಗುವಂತೆ ಮಾಡಿತು.
ಗಾಯಕಿ ರೇವತಿ ಅನಿಲಕುಮಾರ, ಅರ್ಪಿತಾ ಜಹಾಗೀರದಾರ ಅವರ ಅವರ ಗಾಯನ ಸಂಗೀತದ ಅಲೆಯಲ್ಲಿ ತೇಲುವಂತೆ ಮಾಡಿತು. ಪ್ರಸಾದ ಮಡಿವಾಳರ ತಬಲಾ, ಚಿದಂಬರ ಜೋಶಿ ಅವರ ಹಾರ್ಮೋನಿಯಂ ಸಾಥ್ ಕೇಳುಗರನ್ನು ಮಂತ್ರಮುಗ್ಧಗೊಳಿಸಿತು.
ಉದ್ಘಾಟನೆ: ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹುಬ್ಬಳ್ಳಿಯ ಸಂಗೀತ ಮತ್ತು ಸಾಹಿತ್ಯ ಲೋಕ ಜಗತ್ತಿನಾದ್ಯಂತ ಪಸರಿಸಬೇಕು. ಈ ಪರಂಪರೆ ಚಿರಕಾಲ ನಮ್ಮ ಮಧ್ಯೆ ಉಳಿಯುವಂತೆ ಕಾಪಿಟ್ಟುಕೊಳ್ಳಬೇಕು ಎಂದರು.
ಪಂ. ಶ್ರೀಕಾಂತ ಕುಲಕರ್ಣಿ ಮಾತನಾಡಿ, ನಾನು ಸಂಗೀತಗಾರ. ಆದರೆ ಮಾತು ಅನಿವಾರ್ಯವಾಗಿದೆ. ಸೂರ್ಯನ ಮುಂದೆ ಚಂದ್ರನ ರೂಪ ನಮ್ಮದು ಎಂದಷ್ಟೇ ಹೇಳಬಲ್ಲೆ ಎಂದು ಹೇಳಿದರು. ಅಲ್ಲದೇ ಒಂದು ಹಾಡು ಹಾಡಿ ಗಮನ ಸೆಳೆದರು.
ಕ್ಷಮತಾ ಸೇವಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ, ಈಶ್ವರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸಂತೋಷ ವೆರ್ಣೇಕರ, ಸಿಂಫೋನಿ ಇನ್‌ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ನಿರ್ದೇಶಕ ಸಂತೋಷ ಮೊಕಾಸಿ ಇತರರು ಇದ್ದರು. ಮಾಯಾ ರಾಮನ್(ಚಿಕ್ಕೇರೂರು) ನಿರೂಪಿಸಿದರು.