

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
ಸರಣಿ ಹಬ್ಬಗಳ ಮಾಸವಾಗಿರುವ ಶ್ರಾವಣದಲ್ಲಿ ಬೇಡಿಕೆ ಹೆಚ್ಚಾಗಿರುವ ಕಾರಣ ಹೂವು, ಹಣ್ಣು, ಕಾಯಿ, ಎಲೆ, ಮತ್ತಿತರ ಪೂಜಾ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ. ಆದರೆ, ಈ ಬಾರಿ ಪೂಜೆ ಸಾಮಗ್ರಿಗಳ ಜತೆಗೆ ನಿತ್ಯದ ಅಡುಗೆಗೆ ಪ್ರಮುಖವಾಗಿ ಬೇಕಾಗುವ ಉಳ್ಳಾಗಡ್ಡಿ ಬೆಲೆ ಗಗನಮುಖಿಯಾಗಿದೆ.
ಹುಬ್ಬಳ್ಳಿಯಲ್ಲಿ ವಿವಿಧ ಸಂತೆಗಳಲ್ಲಿ ಮತ್ತು ತರಕಾರಿ ವ್ಯಾಪಾರಸ್ಥರು ಆ. 24ರಂದು ಪ್ರತಿ ಕೆಜಿ ಉಳ್ಳಾಗಡ್ಡಿಗೆ ಕನಿಷ್ಠ 50 ರಿಂದ ಗರಿಷ್ಠ 60 ರೂ.ವರೆಗೆ ಮಾರಾಟ ಮಾಡಿರುವುದು ಕಂಡು ಬಂತು. ಸಾಮಾನ್ಯವಾಗಿ ಕೆಜಿಗೆ 30ರಿಂದ 40 ರೂ. ಇರುವ ದರ ದೀಢಿರನೆ ದುಪ್ಪಟ್ಟು ಆಗಿದ್ದರಿಂದ ಗ್ರಾಹಕರು ಕೊಂಚ ಯೋಚಿಸಿ ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು.
ಬೆಲೆ ಏರಿಕೆಗೆ ಕಾರಣ: ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಉಳ್ಳಾಗಡ್ಡಿ ಬೆಳೆ ಕಡಿಮೆ ಇರುತ್ತದೆ. ಈ ವೇಳೆ ಹಬ್ಬ ಹರಿದಿನಗಳು ಹೆಚ್ಚಿಗೆ ಇರುವುದರಿಂದ ಬೇಡಿಕೆ ಹೆಚ್ಚಿಗೆ ಇರುತ್ತದೆ. ಹೀಗಾಗಿ, ಸಣ್ಣಪುಟ್ಟ ವ್ಯಾಪಾರಸ್ಥರು ಮಾಮೂಲಿ ದರಕ್ಕಿಂತ ಸ್ವಲ್ಪ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಾರೆ ಎನ್ನುತ್ತಾರೆ ಹುಬ್ಬಳ್ಳಿ ಎಪಿಎಂಸಿ ಸಗಟು ವ್ಯಾಪಾರಸ್ಥರು. ಹೊಸ ಫಸಲು ಕಟಾವಿಗೆ ಬರಲು ಇನ್ನೂ 1ರಿಂದ ಒಂದೂವರೆ ತಿಂಗಳಾಗಬಹುದು. ಅಲ್ಲಿಯವರೆಗೆ ಉಳ್ಳಾಗಡ್ಡಿ ದರ ಕೆಜಿಗೆ 80ರಿಂದ 90 ರೂ.ವರೆಗೂ ಏರಬಹುದು ಎನ್ನುತ್ತಾರೆ ವ್ಯಾಪಾರಸ್ಥರು.
ವ್ಯಾಪಾರಿಗಳು ಹೇಳೋದು...
ಮಹಾರಾಷ್ಟದ ಪುಣೆ, ಆಂಧ್ರ ಪ್ರದೇಶದ ಕರ್ನಲ್ ನಲ್ಲಿ ಸದ್ಯ ಮಳೆ ಆಗುತ್ತಿರುವುದರಿಂದ ಕಟಾವು ಮಾಡಿದ ಉಳ್ಳಾಗಡ್ಡಿ ಬೆಳೆ ಸ್ವಲ್ಪ ಪ್ರಮಾಣದಲ್ಲಿ ಹಾಳಾಗಿದೆ. ಇನ್ನು ಕಟಾವು ಮಾಡಬೇಕಿದ್ದ ಬೆಳೆ ಅತಿಯಾದ ಮಳೆಯಿಂದ ಹಾನಿಯಾಗಿದೆ. ಹೀಗಾಗಿ, ಉತ್ತಮ ಗುಣಮಟ್ಟದ ಉಳ್ಳಾಗಡ್ಡಿ ಆವಕ ಕಡಿಮೆಯಾಗಿದೆ. ಆದರೆ, ಬೇಡಿಕೆ ಹೆಚ್ಚಿದೆ, ಹೀಗಾಗಿ ದರ ಹೆಚ್ಚಾಗಿದೆ ಎನ್ನುತ್ತಾರೆ ಹುಬ್ಬಳ್ಳಿ ಎಪಿಎಂಸಿಯಲ್ಲಿ ವರ್ತಕರು.
ಮೊದಲು ಉಳ್ಳಾಗಡ್ಡಿ ದರ ಕಡಿಮೆ ಇದ್ದುದರಿಂದ ಕೇಂದ್ರ ಸರ್ಕಾರ ರಫ್ತು ಮಾಡಲು ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಅನುಮತಿ ನೀಡಿದೆ. ಇದರಿಂದ ಬೆಲೆ ಹೆಚ್ಚಾಗಿರಬಹುದು. ಇದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕೊಂಚ ಹೊರೆಯಾಗುತ್ತದೆ. ಇದೇ ರೀತಿ ದರ ಏರಿಕೆಯಾದರೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು.| ಮಹೇಶ ಬಣಕಾರ ಹುಬ್ಬಳ್ಳಿ ಗ್ರಾಹಕ ಹುಬ್ಬಳ್ಳಿಯಲ್ಲಿ ಉಳ್ಳಾಗಡ್ಡಿ ದರ ಕೆಜಿಗೆ 60 ರೂಪಾಯಿ ಆಗಿದೆ. ಇದರಿಂದ ಅಡುಗೆಗೆ ನೋಡಿ ಬಳಸುವಂತಾಗಿದೆ. ವ್ಯಾಪಾರಸ್ಥರು ಅತಿಯಾಗಿ ಲಾಭದಾಸೆ ನೋಡದೇ ಗ್ರಾಹಕರ ಹಿತದೃಷ್ಟಿಯಿಂದ ಆದಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಬೇಕು.| ನೀಲಾವತಿ ತೋಟದ ಗ್ರಾಹಕರು ಹುಬ್ಬಳ್ಳಿ