

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ ಇಲ್ಲಿನ ನ್ಯೂ ಮ್ಯಾದಾರ ಓಣಿಯಲ್ಲಿ ಪ್ರತಿಷ್ಠಾಪಿಸಿರುವ ಕಾಮಣ್ಣನಿಗೆ 200 ವರ್ಷಗಳ ಇತಿಹಾಸವಿದೆ. ಬೇಡಿ ಬಂದ ಭಕ್ತರ ಇಷ್ಟಾರ್ಥ ಸಿದ್ಧಿಸುವ ಮ್ಯಾದಾರ ಕಾಮಣ್ಣ ಎಂದೇ ಪ್ರಸಿದ್ಧಿಯಾಗಿದ್ದಾನೆ. ರಾಜ್ಯದ ವಿವಿಧ ಜಿಲ್ಲೆಗಳು, ಮಹಾರಾಷ್ಟ್ರ ಮತ್ತು ಗೋವಾದಿಂದ ಕೂಡ ಭಕ್ತರು ಇಲ್ಲಿಗೆ ಬಂದು ಕಾಮಣ್ಣನ ದರ್ಶನ ಪಡೆಯುತ್ತಾರೆ. ಕಂಕಣ ಭಾಗ್ಯಕ್ಕಾಗಿ, ಮಕ್ಕಳಾಗದ ದಂಪತಿ, ಮನೆ ಕಟ್ಟಿಸಬೇಕು ಎನ್ನುವವರು, ಉದ್ಯೋಗ, ಆರೋಗ್ಯ ಹೀಗೆ ಅನೇಕ ಬೇಡಿಕೆ ಈಡೇರಿಸುವಂತೆ ಭಕ್ತರು ಕಾಮಣ್ಣನಲ್ಲಿ ಬೇಡಿಕೊಳ್ಳುತ್ತಾರೆ. ಇಷ್ಟಾರ್ಥ ಸಿದ್ಧಿಯಾದ ಬಳಿಕ ಬಾಸಿಂಗ, ಹೂವಿನ ಹಾರ, ಸೋರೆಕಾಯಿ, ಬಿದಿರು, ಬಣ್ಣದ ಹಾಳೆಗಳನ್ನು ಅರ್ಪಿಸಿ ಹರಕೆ ತೀರಿಸುತ್ತಾರೆ. ಮುಖದ ವಿಶೇಷ: ಕಾಮಣ್ಣನ ಮುಖ ನೂರಾರು ವರ್ಷಗಳಷ್ಟು ಹಳೆಯದು. ಇದನ್ನು ಹಿರಿಯರು ವಿವಿಧ ಗಿಡಮೂಲಿಕೆಗಳು, ಅಂಟು, ಬೆಲ್ಲ, ಹುಣಸಿಕೊಪ್ಪ ಮುಂತಾದ ಪದಾರ್ಥಗಳಿಂದ ತಯಾರಿಸಿದ್ದಾರೆ. ಮೂರ್ತಿಯ ಮುಖಕ್ಕೆ ಕಮಿಟಿ ವತಿಯಿಂದ ಮೂರು ವರ್ಷಕ್ಕೆ ಬಣ್ಣ ಹಚ್ಚಲಾಗುತ್ತದೆ. ಕೆಲವೊಮ್ಮೆ ಭಕ್ತರು ತಾವೇ ಮುಂದೆ ಬಂದು ಕಾಮಣ್ಣನ ಮುಖಕ್ಕೆ ಬಣ್ಣ ಹಚ್ಚಿಸುತ್ತಾರೆ. ಸೋರೇಕಾಯಿ ವಿಶೇಷ: ಮೂರ್ತಿ ಪ್ರತಿಷ್ಠಾಪನೆ ಮಾಡುವಾಗ ಕಾಮಣ್ಣನ ಕಾಲಿನ ಬಳಿ ಕಮಿಟಿ ವತಿಯಿಂದ ಸೋರೆಕಾಯಿ ಕಟ್ಟಲಾಗಿರುತ್ತದೆ. ಅದನ್ನು ಮಕ್ಕಳಾಗದ ದಂಪತಿ ತೆಗೆದುಕೊಂಡು ಹೋಗಿ ಪ್ರಸಾದದ ರೂಪದಲ್ಲಿ ಸೇವಿಸುತ್ತಾರೆ. ಮಕ್ಕಳಾದ ನಂತರ ಬಂದು ಸೋರೆಕಾಯಿ ಕಟ್ಟುತ್ತಾರೆ ಎನ್ನುತ್ತಾರೆ ಸ್ಥಳೀಯರಾದ ಮಂಜುನಾಥ ಭಾವಿಕಟ್ಟಿ. ದಿಗ್ಗಜರ ಸಮಾಗಮ: ನ್ಯೂ ಮ್ಯಾದಾರ ಓಣಿಯ ಕಾಮಣ್ಣ ಮತ್ತು ಹಳೇ ಹುಬ್ಬಳ್ಳಿ ಮ್ಯಾದಾರ ಓಣಿಯ ಕಾಮಣ್ಣನ ಮೂರ್ತಿಗಳು ರಂಗಪಂಚಮಿ ದಿನ ಮಾ. 18ರಂದು ಮೆರವಣಿಗೆ ಮೂಲಕ ದುರ್ಗದಬೈಲ್ ಸರ್ಕಲ್ನಲ್ಲಿ ಮುಖಾಮುಖಿಯಾಗುವುದು ವಿಶೇಷ. ಎರಡೂ ಮೂರ್ತಿಗಳಿಗೆ ಆಯಾ ಕಮಿಟಿ ವತಿಯಿಂದ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಎರಡೂ ಮೂರ್ತಿಗಳು ಮೂಲ ಸ್ಥಾನಕ್ಕೆ ತೆರಳಿದ ನಂತರ ಕಾಮದಹನ ನಡೆಯುತ್ತದೆ. ಈ ಪ್ರಕ್ರಿಯೆ ಕಾರಣಾಂತರಗಳಿಂದ 40 ವರ್ಷಗಳ ಹಿಂದೆ ಸ್ಥಗಿತವಾಗಿತ್ತು. ಕಳೆದ ವರ್ಷ ಮತ್ತೆ ಆರಂಭವಾಗಿದೆ. ಈ ವರ್ಷ ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎನ್ನುತ್ತಾರೆ ಸ್ಥಳೀಯ ಹಿರಿಯರು.
ನ್ಯೂ ಮ್ಯಾದಾರ ಓಣಿಯಲ್ಲಿ ಪರಂಪರೆಯಂತೆ 22 ಅಡಿ ಎತ್ತರದ ಕಾಮಣ್ಣನ ಮೂರ್ತಿಯನ್ನು 4 ಕಲಾವಿದರು 10 ದಿನಗಳವರೆಗೆ ಬಿದಿರಿನಿಂದ ನಿರ್ವಿುಸುತ್ತಾರೆ. ಹೋಳಿ ಹುಣ್ಣಿಮೆ ದಿನ ಪ್ರತಿಷ್ಠಾಪಿಸಲಾಗುತ್ತದೆ. 5 ದಿನ ವಿಶೇಷ ಪೂಜೆ ಮಾಡಲಾಗುತ್ತದೆ. | ಬಸವರಾಜ ಕುಂದಗೋಳ ಹೊಸ ಹುಬ್ಬಳ್ಳಿ ಮೇದಾರ ಕರೇಮ್ಮದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಇಲ್ಲಿನ ಕಾಮಣ್ಣ ದೇವರ ಮುಖದ ವಿಶೇಷತೆ ತುಂಬಾ ಇದೆ. ಮೊದಲ 2 ದಿನ ನಗು ಮುಖ ಇರುತ್ತದೆ. 3 ಮತ್ತು 4ನೇ ದಿನ ತೇಜಸ್ಸು ಕಡಿಮೆ ಆಗಿರುತ್ತದೆ. 5ನೇ ದಿನ ಸ್ವಲ್ಪ ಕೋಪಗೊಂಡಂತೆ ಕಾಣುತ್ತದೆ. | ಸಿದ್ದಪ್ಪ ಬಮ್ಮಿಗಟ್ಟಿ ಹೊಸ ಹುಬ್ಬಳ್ಳಿ ಮೇದಾರ ಕರೇಮ್ಮದೇವಸ್ಥಾನ ಟ್ರಸ್ಟ್ ಉಪಾಧ್ಯಕ್ಷ