

ಹುಬ್ಬಳ್ಳಿ: ನವನಗರ ವೀರಶೈವ ಸಮಾಜ ಸಂಘಟನಾ ಸಮಿತಿ ಆಶ್ರಯದಲ್ಲಿ ಮೇ 23ರಂದು ಜರುಗಲಿರುವ ಶ್ರೀ ವೀರಭದ್ರಸ್ವಾಮಿ ದೇವಾಲಯದ 14ನೇ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಜಗದ್ಗುರು ಪಂಚಾಚಾರ್ಯರ ಜಯಂತಿ ಯುಗಮಾನೋತ್ಸವ, ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳ ಜಯಂತಿ ನಿಮಿತ್ತ ಮೇ 19ರಿಂದ 23ರವರೆಗೆ 5 ದಿನ ಧರ್ಮ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಮೇ 19ರಂದು ಬೆಳಗ್ಗೆ 9ಗಂಟೆಗೆ ಷಟ್‌ಸ್ಥಲ ಧ್ವಜಾರೋಹಣ, ಪ್ರಧಾನ ಅರ್ಚಕ ಶಂಕ್ರಯ್ಯಶಾಸ್ತ್ರೀ ರಥಕ್ಕೆ ಪೂಜೆ ನೆರವೇರಿಸುವರು. 20ರಂದು ಸಂಜೆ 6 ಗಂಟೆಗೆ ಶ್ರೀ ಜಗದ್ಗುರು ಪಂಚಾಚಾರ್ಯರ ಜಯಂತಿ ಯುಗಮಾನೋತ್ಸವವನ್ನು ನರಗುಂದ ಪಂಚಗೃಹ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು. ವೀರಶೈವ ಸಮಾಜ ಸಂಘಟನಾ ಸಮಿತಿ ಅಧ್ಯಕ್ಷ ಅನಿಲಕುಮಾರ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸುವರು. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ, ಗಣ್ಯರಾದ ಶಿವಪ್ಪ ಹೊರಕೇರಿ, ವಿ.ಎಸ್. ನೂಲಿನ ಪಾಲ್ಗೊಳ್ಳುವರು. ಮೇ 21ರಂದು ಸಂಜೆ 6 ಗಂಟೆಗೆ ನಡೆಯಲಿರುವ ಶ್ರೀ ಹಾನಗಲ್ಲ ಕುಮಾರ ಸ್ವಾಮೀಜಿ ಜಯಂತಿಯನ್ನು ಹಾವೇರಿ ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಉದ್ಘಾಟಿಸುವರು. ಪ್ರಾಧ್ಯಾಪಕ ಐ.ಎಸ್. ಹಿರೇಮಠ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಪಾಲ್ಗೊಳ್ಳುವರು.
ಧರ್ಮ ಸಂಗಮ: ಮೇ 22ರಂದು ಸಂಜೆ 6 ಗಂಟೆಗೆ ಜರುಗಲಿರುವ ಧರ್ಮ ಸಂಗಮ ಚಿಂತನ ಗೋಷ್ಠಿಯನ್ನು ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಉದ್ಘಾಟಿಸುವರು. ನವನಗರದ ಕಾಶಿಶಾಖಾಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಸಾಹಿತಿ ಶಾಮಸುಂದರ ಬಿದರಕುಂದಿ, ಮಧುರಾ ಅಶೋಕಕುಮಾರ, ರಾಚಯ್ಯ ವಾರಿಕಲ್ಲಮಠ ಪಾಲ್ಗೊಳ್ಳುವರು. ಅನಿಲಕುಮಾರ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸುವರು. ಮೇ 23ರಂದು ಸಂಜೆ 5ಕ್ಕೆ ನಡೆಯುವ ಶ್ರೀ ವೀರಭದ್ರಸ್ವಾಮಿ ವಾರ್ಷಿಕ ರಥೋತ್ಸವವನ್ನು ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸುವರು. ಆಗಿ ಹುಣ್ಣಿಮೆಯ ದಿನ ಪ್ರಾತಃಕಾಲ ಶ್ರೀ ವೀರಭದ್ರಸ್ವಾಮಿಗೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ ವಿಶೇಷ ಪೂಜೆಯ ನಂತರ ಪಲ್ಲಕ್ಕಿ ಉತ್ಸವ ನವನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಮೇ 21ರಂದು ಪ್ರಾತಃಕಾಲದಲ್ಲಿ ಜಂಗಮ ವಟುಗಳ ಅಯ್ಯಚಾರ ಹಾಗೂ ಭಕ್ತಗಣಕ್ಕೆ ಇಷ್ಟಲಿಂಗ ದೀಕ್ಷೆ ನಡೆಯಲಿದೆ. ಅಯ್ಯಚಾರ ಹಾಗೂ ಇಷ್ಟಲಿಂಗ ದೀಕ್ಷೆಯಲ್ಲಿ ಭಾಗವಹಿಸುವ ಆಸಕ್ತರು ವೀರಶೈವ ಸಮಾಜ ಸಂಘಟನಾ ಸಮಿತಿ, ಶ್ರೀ ವೀರಭದ್ರೇಶ್ವರ ದೇವಸ್ಥಾನ, ನವನಗರ- ಹುಬ್ಬಳ್ಳಿ ಈ ವಿಳಾಸ ಸಂಪರ್ಕಿಸಬೇಕು ಎಂದು ಸಮಿತಿ ಉಪಾಧ್ಯಕ್ಷ ಅಶೋಕ ಬಾಳಿಕಾಯಿ, ಕಾರ್ಯದರ್ಶಿ ಸಂಗಮೇಶ ಹೊರಗಿನಮಠ, ಸಹ ಕಾರ್ಯದರ್ಶಿ ಈರಣ್ಣ ಪುರಾಣಿಕಮಠ, ಕೋಶಾಧ್ಯಕ್ಷ ಕುಬೇರಪ್ಪ ಸವಡಿ ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.