ಕೆಸರು ಗದ್ದೆಯಾದ ಮುದುಗಲ್ ಲೇಔಟ್ ರಸ್ತೆ

7-HBL- MUDAGAL LAY OUT
Published on

ಹುಬ್ಬಳ್ಳಿ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಹುಬ್ಬಳ್ಳಿ ಕೇಶ್ವಾಪುರ ವಸಂತನಗರದ ಮುದುಗಲ್ ಲೇ ಔಟ್ ರಸ್ತೆ ಕೆಸರುಗದ್ದೆಯಂತಾಗಿದ್ದು, ಸಂಚಾರ ಅಸಹನೀಯವಾಗಿದೆ.
ಎಷ್ಟೋ ವರ್ಷಗಳ ಹಿಂದೆ ಹಾಕಿರುವ ರಸ್ತೆಯ ಡಾಂಬರ್ ಕಿತ್ತು ಹೋಗಿದ್ದು, ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿದೆ. ಇದೀಗ ಮಳೆಯಿಂದ ರಸ್ತೆಯಲ್ಲಿ ಸಂಚರಿಸಲು ಅಸಾಧ್ಯವಾಗಿದೆ. ದ್ವಿಚಕ್ರ ವಾಹನ ಸವಾರರು ಬಹಳ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು. ಪಾದಚಾರಿಗಳು ಮನೆಯಿಂದ ಹೊರಗೆ ಬರುವ ಪರಿಸ್ಥಿತಿಯೇ ಇಲ್ಲ. ಅಷ್ಟೊಂದು ದುಸ್ಥಿತಿಗೆ ತಲುಪಿದೆ ಈ ರಸ್ತೆ.
ಮುದುಗಲ್ ಲೇಔಟ್, ಕುಸುಗಲ್ಲ ರಸ್ತೆಗೆ ಹೊಂದಿಕೊಂಡಿದೆ. ನಗರದ ಪ್ರತಿಷ್ಠಿತರು ವಾಸಿಸುವ ಬಡಾವಣೆ. ಇದು ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಬಡಾವಣೆಯಲ್ಲ. ಇಲ್ಲಿ ಕಳೆದ 20-25 ವರ್ಷಗಳಿಂದ ವಾಸಿಸುತ್ತಿರುವ ನಿವಾಸಿಗಳಿದ್ದಾರೆ. ಇಲ್ಲಿಯ ರಸ್ತೆಯ ಎರಡೂ ಕಡೆ ಗಟಾರವಿಲ್ಲ. ಈಗಲೇ ಜಿಟಿ ಜಿಟಿ ಮಳೆಗೆ ರಸ್ತೆಯಲ್ಲಿ ನೀರು ನಿಂತಿದೆ. ದೊಡ್ಡ ಮಳೆಯಾದರೆ ರಸ್ತೆಗಳು ಜಲಾವೃತಗೊಳ್ಳುವ ಅಪಾಯ ಇದ್ದಿದ್ದೇ. ಆಸ್ತಿ ತೆರಿಗೆ ರೂಪದಲ್ಲಿ ಲಕ್ಷಾಂತರ ರೂಪಾಯಿ ಆದಾಯ ಸಂಗ್ರಹಿಸುವ ಹು-ಧಾ ಮಹಾನಗರ ಪಾಲಿಕೆಯು ಈ ಬಡಾವಣೆಯಲ್ಲಿ ಸುವ್ಯವಸ್ಥಿತ ರಸ್ತೆ ಹಾಗೂ ಗಟಾರ ನಿರ್ಮಿಸದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ ವೇಳೆ ಶಾಲಾ-ಕಾಲೇಜು, ಕಚೇರಿ ಕೆಲಸಕ್ಕೆ ತೆರಳುವವರು ಅವಸರ ಪಟ್ಟರೆ ಅವಘಡ ನಿಶ್ಚಿತ. ನಿತ್ಯವೂ ನಾಲ್ಕೈದು ಜನ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು, ಗಾಯಗೊಳ್ಳುತ್ತಿದ್ದಾರೆ. ‘ರಸ್ತೆ ಹಾಗೂ ಗಟಾರ ನಿರ್ಮಾಣಕ್ಕೆ ಆಗ್ರಹಿಸಿ ಪಾಲಿಕೆಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರು ದೂರಿದ್ದಾರೆ. ಈ ಬಡಾವಣೆಯು ವಾರ್ಡ್ ನಂ. 49 ಹಾಗೂ ವಲಯ ಕಚೇರಿ ನಂ. 6ರ ವ್ಯಾಪ್ತಿಯಲ್ಲಿ ಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net