

ಹುಬ್ಬಳ್ಳಿ: ತಾಲೂಕಿನ ಕುಸುಗಲ್ಲ ಗ್ರಾಮ ಪಂಚಾಯಿತಿಯ 2025-26ನೇ ಸಾಲಿನ ಒಂದನೇ ಸುತ್ತಿನ ಗ್ರಾಮ ಸಭೆ ಸರ್ಕಾರಿ ಪ್ರೌಢಶಾಲೆ ಭೋಜನಾಲಯದಲ್ಲಿ ತಾಪಂ ಪಿಎಂ ಪೋಷಣ್ (ಅಕ್ಷರ ದಾಸೋಹ) ಸಹಾಯಕ ನಿರ್ದೇಶಕ ಡಾ. ಸಂಗಮೇಶ ಬಂಗಾರಿಮಠ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿತು.
ಗ್ರಾಮದಲ್ಲಿ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆ ಯಡಿ ಕುಡಿಯುವ ನೀರು ಪೂರೈಸಲು ಪೈಪ್ಲೈನ್ ಅಳವಡಿಸಲಾಗಿದೆ. ಆದರೆ, ಆ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಸುತ್ತಿಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ, ನೀರು ಪೂರೈಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ, ನೀರು ಸರಬರಾಜು ಮಾಡಲಾಗುವುದು ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ. ಸಂಗಮೇಶ ಬಂಗಾರಿಮಠ ಮಾತನಾಡಿ, ವಿವಿಧ ಯೋಜನೆಗಳಡಿ ಅರ್ಜಿ ಸಲ್ಲಿಸಿರುವ ಗ್ರಾಮಸ್ಥರಿಗೆ ನಿಯಮಾನುಸಾರ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಜನರ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ಸ್ಪಂದಿಸಬೇಕು ಎಂದು ಸೂಚಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರಿಗೆ ಲಭ್ಯ ಇರುವ ಯೋಜನೆಗಳ ಮಾಹಿತಿ ನೀಡಿದರು. ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲವ್ವ ಮಲ್ಲಯ್ಯ ಮಠಪತಿ, ಉಪಾಧ್ಯಕ್ಷೆ ಜೈತುನಬಿ ನದಾಫ್, ಸದಸ್ಯ ಸೋಮು ಪಟ್ಟಣಶೆಟ್ಟಿ, ಸೋಮನಗೌಡ ಪಾಟೀಲ, ನಿಂಗಪ್ಪ ಕರೆಣ್ಣವರ, ಗಿರಿಜವ್ವ ನೂಲ್ವಿ, ನೇತ್ರಾವತಿ ಸುಂಕದ, ಉಸ್ಮಾನಸಾಬ್ ಮುಲ್ಲಾ, ಮಂಜುನಾಥ ಪಟ್ಟಣಶೆಟ್ಟಿ, ಸಂತೋಷಕುಮಾರ ಗುಡಸಲಮನಿ, ಮಲಂಗ್ಸಾಬ್ ಗುದಗಿ, ಶಕೀರಾಬಾನು ಹುಬ್ಬಳ್ಳಿ, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಪಿಡಿಒ ಎಸ್.ಆರ್. ಮಂಟೂರ, ಕಾರ್ಯದರ್ಶಿ ರಾಬರ್ಟ್ ಮನೋಹರ, ಶಿಕ್ಷಕ ಇರಕಲ್ಲ ನಿರ್ವಹಿಸಿದರು.