

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
ಗ್ರಾಮಸ್ಥರು ಒಗ್ಗಟ್ಟಾದರೆ ಏನೆಲ್ಲ ಅಭಿವೃದ್ಧಿ ಕೆಲಸ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಧಾರವಾಡ ತಾಲೂಕಿನ ಕಟ್ಟಕಡೆಯ ಗ್ರಾಮ ಜೀರಿಗಿವಾಡ! ಇದರ ಹೆಸರೇ ಹೇಳುವಂತೆ ಇದೊಂದು ಪುಟ್ಟ ಹಳ್ಳಿ. ಹಿಂದೆ ಕಿತ್ತೂರು ಸಂಸ್ಥಾನಕ್ಕೆ ಸೇರಿದ ಒಂದು ಸಣ್ಣ ವಾಡೆ, ಹೀಗಾಗಿ ಇದಕ್ಕೆ ಜೀರಿಗಿವಾಡ ಎಂಬ ಹೆಸರು ಬಂದಿದೆಯಂತೆ.
ಎಲ್ಲ ಹಳ್ಳಿಗಳಂತೆ ಇಲ್ಲಿ ಕೂಡ ಮೂಲಸೌಕರ್ಯಗಳ ಕೊರತೆ ಇತ್ತು. ಕಳೆದ ಐದು ವರ್ಷಗಳ ಹಿಂದೆ ಗ್ರಾಮಸ್ಥರೆಲ್ಲ ಸೇರಿ ಮೊದಲು ತಮ್ಮ ಊರಿನಲ್ಲಿರುವ ಎರಡು ಎಕರೆ ವಿಸ್ತೀರ್ಣದ ಕೆರೆಯ ಹೂಳೆತ್ತುವ ಕಾರ್ಯ ಆರಂಭಿಸಿದರು. ಕೆರೆ ಗ್ರಾಮಸ್ಥರಿಗೆ ವರದಾನವಾಯಿತು ಎನ್ನುತ್ತಾರೆ ಗ್ರಾಮದ ಹಿರಿಯರು.
10 ಲಕ್ಷ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ: ನರೇಗಾ ಯೋಜನೆಯಡಿ ಕೆರೆ ಹೂಳೆತ್ತಲಾಯಿತು. ಯೋಜನೆಯ ಜಾಬ್ಕಾರ್ಡ್ ಇದ್ದವರು ಇಲ್ಲಿ ಕೆಲಸ ಮಾಡಿದರು. ಎಲ್ಲರೂ ಕೂಲಿ ಹಣವನ್ನು ಕೆರೆ ಅಭಿವೃದ್ಧಿಗೆ ನೀಡಿದರು. ಟ್ರ್ಯಾಕ್ಟರ್ ಟ್ರ್ಯಾಲಿ ಮೂಲಕ ಅಂದಾಜು 4 ಸಾವಿರಕ್ಕಿಂತ ಹೆಚ್ಚು ಟ್ರಿಪ್ ಮಣ್ಣನ್ನು ಕೆರೆಯಿಂದ ಹೊರ ತೆಗೆದು, ಗ್ರಾಮದ ರಸ್ತೆ, ಮನೆಯ ಹಿತ್ತಲು, ಹೊಲಗಳಿಗೆ ಹಾಕಿಸಿಕೊಂಡರು. ಎಲ್ಲ ಮೂಲಗಳಿಂದ ಹಣ ಸಂಗ್ರಹಿಸಿ ಅಂದಾಜು 10 ಲಕ್ಷ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿಪಡಿಸಿದ್ದಾರೆ.
1 ಕೋಟಿ ರೂ. ವೆಚ್ಚದಲ್ಲಿ ಶಾಲೆ ಕಟ್ಟಡ: ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಇದ್ದು, ಇಲ್ಲಿ 103 ವಿದ್ಯಾರ್ಥಿಗಳು ಓದುತ್ತಾರೆ. ವಿದ್ಯಾರ್ಥಿಗಳಿಗೆ ಸುಸಜ್ಜಿತ ಶಾಲೆ, ತರಗತಿ ಕೊಠಡಿ ನಿರ್ವಿುಸಬೇಕು ಎಂಬ ಉದ್ದೇಶದಿಂದ ವಿಪ ಸದಸ್ಯ ಸಾಬಣ್ಣ ತಳವಾರ ಅವರ ಅನುದಾನ 20 ಲಕ್ಷ ರೂ. ಸೇರಿ ವಿವಿಧ ದಾನಿಗಳ ನೆರವು ಪಡೆದು ಅಂದಾಜು ಕೋಟಿ ರೂ. ವೆಚ್ಚದಲ್ಲಿ ಶಾಲೆ ಕಟ್ಟಡ ನಿರ್ವಿುಸಲಾಗಿದೆ. ಶಾಲೆಗೆ ಹೊಂದಿಕೊಂಡಂತೆ ಸುಸಜ್ಜಿತ ಅಂಗನವಾಡಿ ಕಟ್ಟಡ ಕೂಡ ನಿರ್ವಿುಸಲಾಗುತ್ತಿದೆ. ಯೂತ್ ಫಾರ್ ಸೇವಾ ಮತ್ತು ಧಾರವಾಡದ ರಾಷ್ಟ್ರೋತ್ಥಾನ ಕೇಂದ್ರದವರು ಶಾಲೆ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ನೀಡಲು ಮುಂದೆ ಬಂದಿದ್ದಾರೆ.
ಮದ್ಯಮುಕ್ತ ಗ್ರಾಮ ಗ್ರಾಮದಲ್ಲಿ 1,500 ಜನಸಂಖ್ಯೆ ಇದ್ದು, 9 ದೇವಸ್ಥಾನ ಮತ್ತು 4 ಬಾವಿಗಳಿವೆ. ಗ್ರಾಮದಲ್ಲಿ ತಂಬಾಕು, ಗುಟ್ಖಾ, ಮದ್ಯ ಮಾರಾಟ ಮಾಡುವುದಿಲ್ಲ. ಇಲ್ಲಿ ಯಾರೂ ಇಸ್ಪೀಟ್ ಆಡುವುದಿಲ್ಲ. ಕೊಟಬಾಗಿ ಗ್ರಾಪಂ ವ್ಯಾಪ್ತಿಯ ಜೀರಿಗಿವಾಡದಲ್ಲಿ ಗ್ರಾಪಂ 2 ಸ್ಥಾನಗಳಿದ್ದು, ಇವುಗಳಿಗೆ ಅವಿರೋಧ ಆಯ್ಕೆ ಮಾಡಲಾಗಿದೆ.
ಗ್ರಾಮದಲ್ಲಿ ಉತ್ತಮ ಶಾಲೆ ಇದ್ದರೆ ಮಕ್ಕಳು ವಿದ್ಯಾವಂತರಾಗಿ ಮುಂದೆ ಗ್ರಾಮದ ಸುಧಾರಣೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಗ್ರಾಮದ ಶಾಲೆಯಲ್ಲಿ ಯಾವುದಕ್ಕೂ ಕೊರತೆ ಆಗದಂತೆ ನೋಡಿಕೊಳ್ಳಲು ದಾನಿಗಳ ನೆರವಿನಿಂದ ಉತ್ತಮ ಕಟ್ಟಡ, ಡಿಜಿಟಲ್ ಸ್ಮಾರ್ಟ್ ಬೋರ್ಡ್, ಯೋಗ, ನೃತ್ಯ, ಸಂಗೀತ, ಜಾನಪದ, ಕ್ರೀಡೆ, ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕಲೆ ಹೀಗೆ ಎಲ್ಲ ಸೌಲಭ್ಯವನ್ನು ನೀಡಿ ಪರಿಪೂರ್ಣ ಶಿಕ್ಷಣ ನೀಡುವ ಗುರಿ ಇದೆ. | ಪ್ರಭಾಕರ ದೇಶಪಾಂಡೆ ಗ್ರಾಪಂ, ಎಸ್ಡಿಎಂಸಿ ಸದಸ್ಯ ಅಂದಾಜು 100 ಯುವಕರ ತಂಡ ಗ್ರಾಮದ ಎಲ್ಲ ಕೆಲಸ ಕಾರ್ಯಗಳಿಗೆ ಕೈ ಜೋಡಿಸುತ್ತಾರೆ. ಊರಿನ ಕೆರೆ, ಬಾವಿ, ಶಾಲೆ ಆವರಣವನ್ನು ಪ್ರತಿ ಭಾನುವಾರ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಮಾಡುತ್ತೇವೆ. ಉತ್ತರ ಕರ್ನಾಟಕದಲ್ಲಿ ಮಾದರಿ ಗ್ರಾಮ ಮಾಡುವುದು ನಮ್ಮ ಉದ್ದೇಶ. | ಅಶ್ವಿನ್ ಭೂಸಾರೆ ಜನನಿ ಪ್ರತಿಷ್ಠಾನ ಸಿಇಒ