

ಹುಬ್ಬಳ್ಳಿ : ಹೋಳಿ ಹಬ್ಬದ ಅಂಗವಾಗಿ ಪ್ರಸಕ್ತ ಸಾಲಿನ ಹುಬ್ಬಳ್ಳಿ ಜಗ್ಗಲಗಿ ಹಬ್ಬ ಮಾ. 16ರಂದು ಮಧ್ಯಾಹ್ನ 3 ಗಂಟೆಗೆ ಇಲ್ಲಿನ ಮೂರುಸಾವಿರ ಮಠದ ಮೈದಾನದಿಂದ ಆರಂಭಗೊಳ್ಳಲಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗ್ಗಲಗಿ ಹಬ್ಬದ ಆಯೋಜಕರಾದ ಶಾಸಕ ಮಹೇಶ ಟೆಂಗಿನಕಾಯಿ, ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಮೆರವಣಿಗೆಯು ಎಸ್.ಟಿ. ಭಂಡಾರಿ ರಸ್ತೆ, ತುಳಜಾಭವಾನಿ ದೇವಸ್ಥಾನ ವೃತ್ತ, ನ್ಯೂ ಮ್ಯಾದರ ಓಣಿ, ಶಿವಾಜಿ ಚೌಕ, ಬ್ರಾಡ್ ವೇ, ದುರ್ಗದಬೈಲ್ ವೃತ್ತ, ರಾಧಾಕೃಷ್ಣ ಗಲ್ಲಿ, ಬಾರಾದಾನ ಸಾಲ, ಜವಳಿ ಸಾಲ, ಬೆಳಗಾಂವ ಗಲ್ಲಿ, ಪೆಂಡಾರ ಗಲ್ಲಿ, ದಾಜಿಬಾನಪೇಟ ಮಾರ್ಗವಾಗಿ ಮರಳಿ ಮೂರುಸಾವಿರ ಮಠದ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
ಸುತ್ತಲಿನ ಹಳ್ಳಿಗಳಾದ ಸುಳ್ಳ, ಬ್ಯಾಹಟ್ಟಿ, ಛಬ್ಬಿ, ಸೂರಶೆಟ್ಟಿಕೊಪ್ಪ, ಅರಳಿಕಟ್ಟಿ, ಅಮರಗೋಳ, ತಾರಿಹಾಳ, ಶಿವಳ್ಳಿ, ಗುಂಡೇನಟ್ಟಿ, ಮರೇವಾಡ, ಬೊಮ್ಮಸಮುದ್ರ, ಅಮ್ಮಿನಬಾವಿ, ಸೋಮನಕೊಪ್ಪ, ಕಣವಿಹೊನ್ನಾಪುರ, ಹಂಚಿನಾಳದಿಂದ ನೂರಾರು ಜಾನಪದ ಕಲಾವಿದರು ತಮ್ಮ ತಂಡಗಳೊಂದಿಗೆ ಭಾಗವಹಿಸುವರು. ಮಹಿಳೆಯರ ಡೊಳ್ಳು ಕುಣಿತದ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಹೋಳಿ ಹುಣ್ಣಿಮೆ ಮಹತ್ವ ಸಾರುವ ಹಾನಗಲ್ಲದ ಕುಮಾರೇಶ್ವರ ಯುವಕ ಮಂಡಳದ ಬೇಡರ ವೇಷದ ತಂಡದ ಸದಸ್ಯರು ಭಾಗವಹಿಸುವರು. ಹುಬ್ಬಳ್ಳಿಯ ಸ್ವರ್ಣ ಮಯೂರಿ ತಂಡದಿಂದ ಶ್ರೀ ಕಾಮಣ್ಣ ಹಾಗೂ ರತಿದೇವಿ ಕಲಾಕೃತಿ ಪ್ರದರ್ಶನವು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ. ಗೋರಿಲ್ಲಾ ಮತ್ತು ಕರಡಿಯ ಗೊಂಬೆಗಳು ಭಾಗವಹಿಸಲಿವೆ ಎಂದು ಹೇಳಿದರು.
ಉಡುಪಿಯ ಕಾಡುಬೆಟ್ಟು ಪ್ರದೇಶದ ಕಿಶೋರ ರಾಜ್ ತಂಡದಿಂದ ಈ ವರ್ಷ ಬೃಹತ್ ಗಾತ್ರದ ನಂದಿಯ ಮೇಲೆ ಕುಳಿತ ಭೋಲೆನಾಥ ಸವಾರಿ ಭಾಗವಹಿಸಲಿದೆ. ಕೊಲ್ಲಾಪುರದ ರಾಜಾ ಕೊಲ್ಲಾಪುರಿ ಬಾಜಾ ಡೋಲ್ ಪಾರ್ಟಿ ತಂಡವು ಇದೇ ಮೊದಲ ಬಾರಿಗೆ ಹುಬ್ಬಳ್ಳಿ ಜಗ್ಗಲಗಿ ಹಬ್ಬದಲ್ಲಿ ಭಾಗವಹಿಸಲಿದೆ ಎಂದರು.
ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿವಿಧ ಮಠಾಧೀಶರು ಪಾಲ್ಗೊಳ್ಳುವರು ಎಂದು ಹೇಳಿದರು.
ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಮೇಯರ್ ರಾಮಪ್ಪ ಬಡಿಗೇರ, ಮಾಜಿ ಶಾಸಕ ಅಶೋಕ ಕಾಟವೆ, ಶಿವು ಮೆಣಸಿನಕಾಯಿ, ಲಿಂಗರಾಜ ಪಾಟೀಲ, ದತ್ತಮೂರ್ತಿ ಕುಲಕರ್ಣಿ, ರವಿ ನಾಯ್ಕ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.