

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ನಗರದ ರಾಣಿ ಚನ್ನಮ್ಮ ಮೈದಾನ (ಈದ್ಗಾ)ದಲ್ಲಿ ಆಯೋಜಿಸಿದ್ದ ನಾಲ್ಕನೇ ವರ್ಷದ ಗಣೇಶೋತ್ಸವ ಅರ್ಥಪೂರ್ಣವಾಗಿ ಸಂಪನ್ನಗೊಂಡಿದೆ. ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಜಾನಪದ ಕಲಾತಂಡಗಳ ಮೂಲಕ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ನಡೆಸಿದ್ದು ರಾಷ್ಟ್ರದ ಗಮನ ಸೆಳೆದಿದೆ ಎಂದು ಮಹಾಮಂಡಳಿಯ ಸ್ವಾಗತ ಸಮಿತಿ ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ ಹಾಗೂ ಸಂಚಾಲನಾ ಸಮಿತಿ ಅಧ್ಯಕ್ಷ ಸಂಜೀವ ಬಡಸ್ಕರ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಬಾರಿ ವಿಭಿನ್ನ ರೀತಿಯಲ್ಲಿ ವಿಸರ್ಜನಾ ಮೆರವಣಿಗೆ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಡಿಜೆ ಬಳಕೆಯನ್ನು ಕೈ ಬಿಟ್ಟು ಕಲಾತಂಡಗಳನ್ನು ಆಹ್ವಾನಿಸಲಾಗಿತ್ತು. ಸುಮಾರು 350 ಕಲಾವಿದರನ್ನೊಳಗೊಂಡ 22 ಜಾನಪದ ಕಲಾ ತಂಡಗಳು ಆಗಮಿಸಿದ್ದವು. ಪಂಚ ವಾದ್ಯ, ಯಕ್ಷಗಾನ ಕುಣಿತ, ಡೋಲು, ಕುಂಭ, ಚೆಂಡೆ, ಶಹನಾಯಿ, ತಮಟೆ, ಕೋಲಾಟ, ಡೋಲ ತಾಷ, ಜಗ್ಗಲಗಿ, ಗೊಂಬೆ ಕುಣಿತ, ಕಂಸಾಳೆ, ಚಾಂಜ್ ಸೇರಿದಂತೆ ಮುಂತಾದ ಕಲಾ ತಂಡಗಳು ಅದ್ಬುತ ಪ್ರದರ್ಶನ ನೀಡಿವೆ ಎಂದಿದ್ದಾರೆ.
ಮೆರವಣಿಗೆ ಉದ್ದಕ್ಕೂ ಹು-ಧಾ ಸಾರ್ವಜನಿಕರು ಭಾಗವಹಿಸಿದ ಕಲಾತಂಡಗಳಿಗೆ ಪ್ರೋತ್ಸಾಹ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಈ ಒಂದು ಉತ್ಸವದಲ್ಲಿ ನಮ್ಮೊಂದಿಗೆ ಪಕ್ಷದ ಕಾರ್ಯಕರ್ತರು, ಸ್ವಯಂ ಸೇವಕರು, ಮಂಡಳಿ ಪದಾಧಿಕಾರಿಗಳು ಕೈ ಜೋಡಿಸಿ ಯಶಸ್ಸಿಗೆ ಕಾರಣೀಕರ್ತರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವಿಶೇಷ ರೀತಿಯ ಮೆರವಣಿಗೆಯನ್ನು ಸಮಾಜ ಮಾದರಿಯಾಗಿ ತೆಗೆದುಕೊಂಡು ರಾಷ್ಟ್ರದಲ್ಲಿ ಗಣೇಶೋತ್ಸವ ಆಚರಣೆ ಮಾಡುತ್ತಿರುವ ಎಲ್ಲ ಸಮಿತಿಯ ಪದಾಧಿಕಾರಿಗಳು ಡಿಜೆ ಬಳಕೆಯನ್ನು ಕೈಬಿಟ್ಟು ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು ಬಿಂಬಿಸುವ ಕಲಾ ತಂಡಗಳಿಗೆ ಅವಕಾಶ ಮಾಡಿಕೊಡಬೇಕು. ನಮ್ಮ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.