

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
ಪ್ರಸಕ್ತ ವರ್ಷದ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸುರಿದ ಭಾರಿ ಮಳೆ, ಗಾಳಿ ಮತ್ತು ಪ್ರವಾಹದಿಂದಾಗಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ (ಹೆಸ್ಕಾಂ) 47.71 ಕೋಟಿ ರೂಪಾಯಿ ಹಾನಿಯಾಗಿದೆ. ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಾದ ಧಾರವಾಡ, ಗದಗ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಹಾವೇರಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುರಿದ ಭಾರಿ ಮಳೆ, ಗಾಳಿಗೆ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕ (ಟಿಸಿ) ಹಾಗೂ ಲೈನ್ (ತಂತಿ) ಹಾಳಾಗಿವೆ.
23,676 ಕಂಬಗಳಿಗೆ ಹಾನಿ: ಹೆಸ್ಕಾಂ ವ್ಯಾಪ್ತಿಯ ಧಾರವಾಡ ಜಿಲ್ಲೆಯಲ್ಲಿ 752 ಕಂಬಗಳು ಧರೆಗುರುಳಿವೆ. ಗದಗ-698, ಹಾವೇರಿ-1,933, ಉತ್ತರ ಕನ್ನಡ-11,880, ಬೆಳಗಾವಿ-3,592, ವಿಜಯಪುರ- 2,126 ಬಾಗಲಕೋಟೆ- 2,695 ಕಂಬಗಳು ನೆಲಕ್ಕುರುಳಿವೆ.
2,252 ಟಿಸಿ ಹಾಳು: ಧಾರವಾಡ-58, ಗದಗ-2, ಹಾವೇರಿ-52, ಉತ್ತರ ಕನ್ನಡ-1,023, ಬೆಳಗಾವಿ-538, ವಿಜಯಪುರ-140, ಬಾಗಲಕೋಟೆ- 439 ವಿದ್ಯುತ್ ಪರಿವರ್ತಕಗಳು ಹಾನಿಯಾಗಿವೆ. 738 ಕಿ.ಮೀ. ವಿದ್ಯುತ್ ತಂತಿ: ಧಾರವಾಡ-1.70 ಕಿ.ಮೀ., ಹಾವೇರಿ-2.17 ಮೀ., ಉತ್ತರ ಕನ್ನಡ- 530.35 ಕಿ.ಮೀ., ಬೆಳಗಾವಿ-127.43 ಕಿ.ಮೀ., ವಿಜಯಪುರ-5.02 ಕಿ.ಮೀ. ಬಾಗಲಕೋಟೆ- 71.89 ಕಿಲೋ ಮೀಟರ್ನಷ್ಟು ವಿದ್ಯುತ್ ತಂತಿ (ಲೈನ್)ಹಾನಿಯಾಗಿದೆ.
ವಿದ್ಯುತ್ ಕಂಬ ಬಿದ್ದಿರುವುದರಿಂದ 31 ಕೋಟಿ. ರೂ., ಟಿಸಿಗಳು ಕೆಟ್ಟಿರುವುದರಿಂದ 12 ಕೋ.ರೂ., ಲೈನ್ಗಳಲ್ಲಿನ ತಂತಿ ಹಾಳಾಗಿರುವುದರಿಂದ 3.95 ಕೋ.ರೂ. ಹಾಗೂ ಇನ್ನಿತರ ಹಾನಿ ಸೇರಿ ಒಟ್ಟು 47.71ಕೋಟಿ ರೂ. ನಷ್ಟವಾಗಿದೆ.
ಉ.ಕ.ದಲ್ಲಿ ಹೆಚ್ಚು ನಷ್ಟ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ, 11,880 ವಿದ್ಯುತ್ ಕಂಬಗಳು ಬಿದ್ದಿದ್ದು, 1,023 ಟಿಸಿಗಳು ಹಾನಿಯಾಗಿವೆ. 530 ಕಿ.ಮೀ. ನಷ್ಟು ವಿದ್ಯುತ್ ತಂತಿ (ಲೈನ್) ಹಾಳಾಗಿದೆ.
ಗದಗ ಜಿಲ್ಲೆ ಕಡಿಮೆ: ಗದಗ ಜಿಲ್ಲೆಯಲ್ಲಿ 698 ಕಂಬಗಳು ಬಿದ್ದಿದ್ದು, 2 ಟಿಸಿಗಳು ಹಾನಿಯಾಗಿವೆ.
ಕಳೆದ ವರ್ಷ 15.89 ಕೋಟಿ ರೂಪಾಯಿ ನಷ್ಟ: ಕಳೆದ 2023-24ರ ಆರ್ಥಿಕ ವರ್ಷದಲ್ಲಿ ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಒಟ್ಟು 11,305 ವಿದ್ಯುತ್ ಕಂಬಗಳು ಬಿದ್ದಿದ್ದವು. 106 ಕಿಲೋ ಮೀಟರ್ನಷ್ಟು ವಿದ್ಯುತ್ ತಂತಿ (ಲೈನ್) ಹಾಳಾಗಿ, ಒಟ್ಟು 15.89 ಕೋ.ರೂ.ಗಳಷ್ಟು ಹಾನಿಯಾಗಿತ್ತು.
2024ರ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸುರಿದ ಭಾರಿ ಮಳೆ, ಬೀಸಿದ ಗಾಳಿ ಮತ್ತು ಪ್ರವಾಹದಿಂದಾಗಿ ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಅಂದಾಜು 47.71 ಕೋಟಿ ರೂ.ಗಳಷ್ಟು ಹಾನಿಯಾಗಿದೆ. ಮುರಿದು ಬಿದ್ದ ವಿದ್ಯುತ್ ಕಂಬ ಹಾಗೂ ಟಿಸಿಗಳನ್ನು ತೆರವುಗೊಳಿಸಿ ಹೊಸ ಕಂಬ ಮತ್ತು ಟಿಸಿಗಳನ್ನು ಅಳವಡಿಸಲಾಗಿದೆ. ಬಾಕಿ ಇರುವ ಕಡೆ ಆದಷ್ಟು ಬೇಗ ಟಿಸಿ ಅಳವಡಿಸಲಾಗುವುದು. ಇನ್ನು ಎನ್ಡಿಆರ್ಎಫ್ ನಿಯಮಗಳನ್ವಯ ಸ್ವಲ್ಪ ಪರಿಹಾರಧನ ಬರುತ್ತದೆ. ಉಳಿದಂತೆ ಹೆಸ್ಕಾಂ ಭರಿಸುತ್ತದೆ.
| ವೈಶಾಲಿ ಎಂ.ಎಲ್. ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ
ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಒಂದು ವಾರ, ಕೆಲ ಗ್ರಾಮಗಳಲ್ಲಿ 15 ದಿನಗಟ್ಟಲೇ ವಿದ್ಯುತ್ ಸಂಪರ್ಕ ಇರುವುದಿಲ್ಲ. ಆಗ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ತೊಂದರೆಯಾಗುತ್ತದೆ. ಅತಿಯಾದ ಮಳೆಯಿಂದ ಭತ್ತ, ಗೋವಿನಜೋಳ ಹಾಳಾಗಿದೆ. ಶುಂಠಿ, ಅನಾನಸ್ ಮತ್ತಿತರ ಬೆಳೆಗೆ ಕೊಳೆ ರೋಗ ತಗುಲಿದೆ. ಅಡಕೆ ಫಸಲು ಹಾನಿಯಾಗಿದೆ. ಅತಿ ಮಳೆ ಬೀಳುವ ವೇಳೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ್ದರಿಂದ ಟಾಕಿಗಳಿಗೆ ನೀರು ಏರಿಸಿ ಬೆಳೆಗಳಿಗೆ ಔಷಧ ಸಿಂಪಡಣೆಗೂ ತೊಂದರೆಯಾಗಿತ್ತು.
| ರಾಘವೇಂದ್ರ ನಾಯ್ಕ ಕಿರವತ್ತಿ, ರೈತ ಸಂಘ ಕಾರ್ಯದರ್ಶಿ