ಗೃಹ ಜ್ಯೋತಿ ಗ್ರಾಹಕರಿಗೆ 85 ಕೋಟಿ ರೂ. ಲಾಭ

20-hescom gruhjyothi bill
Published on

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
ರಾಜ್ಯ ಸರ್ಕಾರ ‘ಗೃಹ ಜ್ಯೋತಿ’ ಯೋಜನೆ(ಉಚಿತ ಬೆಳಕು, ಸುಸ್ಥಿರ ಬದುಕು)ಯನ್ನು ಜುಲೈನಲ್ಲಿ ಅನುಷ್ಠಾನಗೊಳಿಸಿದೆ. ಇದರಿಂದ ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳ ಒಟ್ಟು 28 ಲಕ್ಷ ಗೃಹ ಬಳಕೆ ಗ್ರಾಹಕರು ಅಂದಾಜು 85 ಕೋಟಿ ರೂಪಾಯಿ ಮೊತ್ತದ ಲಾಭ ಪಡೆದಿದ್ದಾರೆ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ವ್ಯಾಪ್ತಿಗೆ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳು ಒಳಪಡುತ್ತವೆ. ಏಳೂ ಜಿಲ್ಲೆಗಳಲ್ಲಿ ಒಟ್ಟು 35,90,841 ವಿದ್ಯುತ್ ಗೃಹಬಳಕೆ ಗ್ರಾಹಕರಿದ್ದಾರೆ. ಆ ಪೈಕಿ 31,80,566 ಗ್ರಾಹಕರು ಗೃಹ ಜ್ಯೋತಿ ಯೋಜನೆಯಡಿ ನೋಂದಣಿ ಮಾಡಿಸಿದ್ದಾರೆ. ಆಗಸ್ಟ್ 16ರವರೆಗೆ 33,84,665 ಬಿಲ್‌ಗಳನ್ನು ಸೃಜಿಸಲಾಗಿದೆ. ಜುಲೈ ಅಂತ್ಯದವರೆಗೆ ನೋಂದಣಿ ಮಾಡಿಸಿದ ಗ್ರಾಹಕರ ಪೈಕಿ ಈವರೆಗೆ ನೀಡಿದ ಬಿಲ್‌ಗಳಲ್ಲಿ 28,04,540 ಗ್ರಾಹಕರು ಗೃಹ ಜ್ಯೋತಿ ಯೋಜನೆ ಲಾಭ ಪಡೆದಿದ್ದಾರೆ. ಇನ್ನೂ ಕೆಲ ಜಿಲ್ಲೆಗಳಲ್ಲಿ ಗೃಹ ಜ್ಯೋತಿ ಯೋಜನೆ ಗ್ರಾಹಕರಿಗೆ ಬಿಲ್ ನೀಡಬೇಕಿದೆ. ಆಗಸ್ಟ್‌ನಲ್ಲಿ ನೋಂದಣಿ ಮಾಡಿಸಿದವರಿಗೆ ಸೆಪ್ಟೆಂಬರ್ ಬಿಲ್‌ನಲ್ಲಿ ಇದರ ಪ್ರಯೋಜನ ಸಿಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಗೃಹ ಜ್ಯೋತಿ ಫಲಾನುಭವಿಗಳು ಜುಲೈನಲ್ಲಿ ಬಳಸಿರುವ ವಿದ್ಯುತ್ ಬಿಲ್ ಮೊತ್ತ ಅಂದಾಜು 85 ಕೋ.ರೂ.ಗಳಾಗಿದೆ. ಇವುಗಳ ಬಿಲ್‌ಅನ್ನು ಆಗಸ್ಟ್‌ನಲ್ಲಿ ನೀಡಲಾಗುತ್ತಿದೆ. ಈ ಪೈಕಿ ಕರ್ನಾಟಕ ಸರ್ಕಾರ ಆಗಸ್ಟ್‌ನಲ್ಲಿ ಹೆಸ್ಕಾಂಗೆ 83.48 ಕೋ. ರೂಪಾಯಿ ಸಹಾಯಧನವನ್ನು ಈಗಾಗಲೇ ಬಿಡುಗಡೆಗೊಳಿಸಿದೆ. ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳ ಪೈಕಿ ಆ. 16ರವರೆಗೆ ಗೃಹಜ್ಯೋತಿ ಯೋಜನೆಗೆ ಒಳಪಡುವ ಮತ್ತು ತಿಂಗಳಿಗೆ 200 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರು ಸೇರಿ ಒಟ್ಟು 33,84,665 ಬಿಲ್‌ಗಳನ್ನು ಸೃಜಿಸಲಾಗಿದೆ. ಒಟ್ಟು ಸೃಜಿಸಲಾಗಿರುವ ಬಿಲ್‌ಗಳ ವಿದ್ಯುತ್ ಬಳಕೆ ಮೊತ್ತ 109 ಕೋಟಿ ರೂಪಾಯಿ ಆಗಿದೆ.

200 ಯೂನಿಟ್ ವಿದ್ಯುತ್ ಫ್ರೀ
ಗೃಹ ಜ್ಯೋತಿಯಡಿ ರಾಜ್ಯದ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ವರೆಗೆ ವಿದ್ಯುತ್ ಬಳಸಲು ಅವಕಾಶವಿದೆ. ಆದರೆ, ಗ್ರಾಹಕರ ಮಾಸಿಕ ಸರಾಸರಿ ಬಳಕೆ (2022-23ರ ಆರ್ಥಿಕ ವರ್ಷದ ಬಳಕೆ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ. 10ರಷ್ಟು ಹೆಚ್ಚಿನ ವಿದ್ಯುತ್ ಬಳಸಲು ಅನುಮತಿ ನೀಡಲಾಗಿದೆ. ಅದಕ್ಕನುಗುಣವಾಗಿ ವಿದ್ಯುತ್ ಬಿಲ್‌ನ ಮೊತ್ತವನ್ನು ಉಚಿತಗೊಳಿಸಲಾಗಿದೆ.

ರಾಜ್ಯ ಸರ್ಕಾರದ ‘ಗೃಹ ಜ್ಯೋತಿ’ ಯೋಜನೆಗೆ ಹೆಸ್ಕಾಂ ವ್ಯಾಪ್ತಿಯ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಯೋಜನೆಗೆ ಜುಲೈನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ನೋಂದಣಿ ಮಾಡಿಸುವ ಮೂಲಕ ಇದರ ಪ್ರಯೋಜನ ಪಡೆದಿದ್ದಾರೆ.ಮೊಹಮ್ಮದ ರೋಷನ್ವ್ಯವಸ್ಥಾಪಕ ನಿರ್ದೇಶಕ, ಹೆಸ್ಕಾಂ ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net