

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆ, ಕಾಲೇಜುಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಹುಬ್ಬಳ್ಳಿಯ ನವನಗರದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಇದಕ್ಕೆ ಭಿನ್ನವಾಗಿದೆ.
ನವನಗರದ ಎಂಪ್ಲಾಯ್‌ಮೆಂಟ್ ಆಫೀಸ್ ಹತ್ತಿರ ಕುವೆಂಪು ರಸ್ತೆಯಲ್ಲಿರುವಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಕಾಲೇಜ್ ಆಗಿ ಹೊರಹೊಮ್ಮಿದೆ. 2007ರಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಗಳೊಂದಿಗೆ ಆರಂಭವಾಗಿದೆ. 2013-14ರಲ್ಲಿ ಆರ್‌ಐಡಿಎಫ್‌ಯಿಂದ 3 ಕೊಠಡಿ, 2020-21ರಲ್ಲಿ 6 ಕೊಠಡಿ ನಿರ್ಮಿಸಲಾಗಿದೆ. 2023-24ನೇ ಸಾಲಿನಲ್ಲಿ ವಿವೇಕ ಯೋಜನೆಯಡಿ 2 ಕೊಠಡಿ ನಿರ್ಮಿಸಲಾಗುತ್ತಿದೆ.
2020-21ನೇ ಸಾಲಿನಿಂದ ವಿಜ್ಞಾನ ವಿಭಾಗ ಆರಂಭವಾಗಿದೆ. 2023-24ನೇ ಸಾಲಿನಲ್ಲಿ 200 ವಿದ್ಯಾರ್ಥಿನಿಯರು, 140 ವಿದ್ಯಾರ್ಥಿಗಳು ಒಟ್ಟು 340 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. 2023-24ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಶೇ. 96.59ರಷ್ಟಾಗಿದೆ. ಕಲಾ ವಿಭಾಗದಲ್ಲಿ ಶೇ 90, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. 100 ರಷ್ಟಾಗಿದೆ.
10 ಲಕ್ಷ ರೂ. ದೇಣಿಗೆ: ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಪ್ರಯತ್ನದಿಂದ ಕವಿವಿ ನಿವೃತ್ತ ನೌಕರ, ಗಾಮನಗಟ್ಟಿಯ ವೀರೇಶ ಶಾಸ್ತ್ರಿಮಠ ಅವರು ಕಾಲೇಜಿಗೆ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಹಣದಲ್ಲಿ ಸಭಾಮಂಟಪ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದ ಸುಸಜ್ಜಿತ ಪ್ರಯೋಗಾಲಯ ನಿರ್ಮಿಸಲಾಗಿದೆ. 2 ಲಕ್ಷ ರೂ.ಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದ್ದು, ಆ ಬಡ್ಡಿ ಹಣದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಕಾಲೇಜ್ ಆವರಣದಲ್ಲಿ ಸುಂದರ ಉದ್ಯಾನವಿದ್ದು, ವಿವಿಧ ಗಿಡಗಳನ್ನು ನೆಡಲಾಗಿದೆ. ವಿದ್ಯಾರ್ಥಿಗಳು ಕುಳಿತುಕೊಳ್ಳಲು ಬೆಂಚ್‌ಗಳನ್ನು ಹಾಕಲಾಗಿದೆ. ನೀರಿಗಾಗಿ ಕೊಳವೆ ಬಾವಿ ಕೊರೆಸಲಾಗಿದೆ.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಅರವಿಂದ ಬೆಲ್ಲದ, ಉಪಾಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ ಮತ್ತು ಸದಸ್ಯರು, ಕಾರ್ಪೋರೇಟರ್ ಸುನೀತಾ ಮಾಳೋದಕರ ಅವರ ಸಹಕಾರದೊಂದಿಗೆ ಕಾಲೇಜು ಅಭಿವೃದ್ಧಿ ಪಥದಲ್ಲಿ ಸಾಗಿದೆ.
ಕ್ರಿಯಾಶೀಲ ಪ್ರಾಚಾರ್ಯ ಅಶೋಕ ಸವಣೂರ ಮತ್ತು ಅನುಭವಿ ಉಪನ್ಯಾಸಕ ವೃಂದವಿದೆ. ಸುಸಜ್ಜಿತ ಕಟ್ಟಡ, ಸ್ವಚ್ಛತೆ, ಹಚ್ಚಹಸಿರು ಪರಿಸರ ಹೊಂದಿದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆಹ್ಲಾದಕರ ವಾತಾವರಣವಿದೆ.
ನವನಗರ ಸರ್ಕಾರಿ ಪಪೂ ಕಾಲೇಜಿನಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಕಾಲೇಜಿಗೆ ಶಿಕ್ಷಣಪ್ರೇಮಿ ವೀರೇಶ ಶಾಸ್ತ್ರಿಮಠ ಅವರು 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಆ ಹಣದಲ್ಲಿ ಕಾಲೇಜಿನಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಅವರ ಆರ್ಥಿಕ ನೆರವು ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿರಲಿದೆ.ಸುರೇಶ ಕೆ.ಪಿ.ಡಿಡಿಪಿಯು ಧಾರವಾಡ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕು ಎಂಬುದು ನನ್ನ ಆಸೆಯಾಗಿತ್ತು. ಹೀಗಾಗಿ, ನವನಗರ ಸರ್ಕಾರಿ ಪಿಯು ಕಾಲೇಜಿಗೆ 10 ಲಕ್ಷ ರೂ. ದೇಣಿಗೆ ನೀಡಿದೆ. ಅದು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಬಳಕೆಯಾಗಿದ್ದು, ಇಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಇದರಿಂದ ನನಗೆ ಸಂತಸವಾಗಿದೆ.ವೀರೇಶ ಶಾಸ್ತ್ರಿಮಠಶಿಕ್ಷಣಪ್ರೇಮಿ ನವನಗರ ಸರ್ಕಾರದ ಸೌಲಭ್ಯ ಮತ್ತು ದಾನಿಗಳ ನೆರವಿನಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ನಾನು ಮತ್ತು ಕಾಲೇಜಿನ ಸಿಬ್ಬಂದಿ ಅವಿರತವಾಗಿ ಶ್ರಮಿಸುತ್ತಿದ್ದೇವೆ. ಕಾಲೇಜಿನ ಅತಿ ಹೆಚ್ಚು ಅಂಕ ಗಳಿಸಿದ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಮಲಬಾರ್ ಗೋಲ್ಡ್ ಹುಬ್ಬಳ್ಳಿಯವರು ತಲಾ 10 ಸಾವಿರ ರೂ.ಗಳಂತೆ ಒಟ್ಟು 15 ವಿದ್ಯಾರ್ಥಿನಿಯರಿಗೆ 1.50 ಲಕ್ಷ ರೂ. ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದ್ದಾರೆ.ಅಶೋಕ ಸವಣೂರಪ್ರಾಚಾರ್ಯ