

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಬಹರೇನ್ನಲ್ಲಿದ್ದ ಉದ್ಯೋಗ ತೊರೆದು ಸ್ವದೇಶದ ಕೃಷಿಯಲ್ಲಿ ಏನಾದರೊಂದು ಸಾಧನೆ ಮಾಡುವ ಹಂಬಲದೊಂದಿಗೆ ದೇಶಕ್ಕೆ ಬಂದ ಗದಗಿನ ಯುವಕನೊಬ್ಬ ಮೀನು ಸಾಕಾಣಿಕೆ ಮತ್ತು ಸಮಗ್ರ ಕೃಷಿ ಮಾಡಿ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್ ಓದಿದ ವಿಜಯ ಹಿರೇಮಠ ಎರಡು ವರ್ಷ ಬಹರೇನ್ನಲ್ಲಿ 2 ವರ್ಷ ಕೆಲಸ ಮಾಡಿ ಮರಳಿ ದೇಶಕ್ಕೆ ಬಂದು ಈಗ ಮೀನು ಸಾಕಾಣಿಕೆ ಮತ್ತು ಸಮಗ್ರ ಕೃಷಿ ಮಾಡುತ್ತಿದ್ದಾರೆ. ಗದಗನಲ್ಲಿರುವ ತಮ್ಮ ಜಮೀನಿನಲ್ಲಿ ಮೂರುವರೆ ವಿಸ್ತೀರ್ಣದ ಕುಡಿಯುವ ನೀರಿನ ಕೆರೆ ಇದೆ. ಕೆರೆಗೆ ಹೊಂದಿಕೊಂಡು 12 ಗುಂಟೆ ಜಾಗದಲ್ಲಿ ಪಾಂಡ್ ಬಯೋ ಫ್ಲಾಕ್ ಪದ್ಧತಿಯಡಿ ಮೀನು ಕೃಷಿ ನಡೆಸುತ್ತಿದ್ದಾರೆ. p>2023-24ರಲ್ಲಿ 68 ಅಡಿ ಅಗಲ, 264 ಅಡಿ ಉದ್ದ, 6 ಅಡಿ ಆಳದ ಹೊಂಡ ನಿರ್ವಿುಸಿದ್ದಾರೆ. ಇದರ ಸುತ್ತ ಮತ್ತು ಕೆಳಗೆ ಟಾರ್ಪಾಲಿನ್ ಅಳವಡಿಸಿದ್ದಾರೆ. ಇದರಿಂದ ನೀರು ಭೂಮಿಯಲ್ಲಿ ಇಂಗುವುದಿಲ್ಲ. ಬಳಕೆಯಾದ ನೀರನ್ನು ತಿಂಗಳಿಗೊಮ್ಮೆ ಪಕ್ಕದ ಕೆರೆಗೆ ಬಿಡಲಾಗುತ್ತದೆ. ಮರಲು ಮೀನು: 2024ರ ಡಿಸೆಂಬರ್ನಲ್ಲಿ 10 ಸಾವಿರ ಮರಲು ತಳಿಯ ಮೀನು ಮರಿಗಳನ್ನು 20 ರೂ.ಗೆ ಒಂದರಂತೆ 2 ಲಕ್ಷ ರೂ. ಪಾವತಿಸಿ ಬೆಂಗಳೂರಿನಿಂದ ತರಲಾಗಿದೆ. 10 ಲಕ್ಷ ರೂ. ಪಾವತಿಸಿ ಮೀನುಗಳಿಗೆ 10 ಟನ್ ಆಹಾರ (ಫೀಡಿಂಗ್)ವನ್ನು ಆಂಧ್ರಪ್ರದೇಶದ ಭೀಮಾವರಂನಿಂದ ತರಲಾಗಿದೆ. ನಿರ್ವಹಣೆ ವೆಚ್ಚ 2 ಲಕ್ಷ ರೂ. ಸೇರಿ 14 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಮೀನು ಮರಿಗಳಿಗೆ ನಿತ್ಯ ಮೂರು ಹೊತ್ತು ಫೀಡಿಂಗ್ ತೇಲುವ ಆಹಾರ ಪದಾರ್ಥ ನೀಡಲಾಗುವುದು. 6 ರಿಂದ 7 ತಿಂಗಳ ಬೆಳೆ: ಮೀನು ಮರಿಗಳನ್ನು 6 ರಿಂದ 7 ತಿಂಗಳ ಬಳಿಕ ಮಾರಾಟ ಮಾಡಲಾಗುವುದು. ಆದರೆ, ಇಲ್ಲಿ ಬೆಳೆದ ಮೀನು ಮರಿಗಳಿಗೆ 9 ತಿಂಗಳಾಗಿದ್ದು, ಒಂದೂವರೆ ಕೆಜಿ ತೂಕ ಹೊಂದಿವೆ. ಮಳೆ ಮತ್ತು ಹಬ್ಬದ ಕಾರಣದಿಂದ ಮಾರಾಟ ವಿಳಂಬವಾಗಿದೆ. 24 ಲಕ್ಷ ರೂ. ಆದಾಯ ನಿರೀಕ್ಷೆ: ಮರಲು ಮೀನುಗಳನ್ನು ಬೆಂಗಳೂರು, ಹೈದರಾಬಾದ್, ಮಧುರೈ, ಕೋಲ್ಕತದ ಮಾರುಕಟ್ಟೆಗೆ ಮಾರಾಟ ಮಾಡಲಾಗುತ್ತದೆ. ಅಲ್ಲಿನ ವ್ಯಾಪಾರಸ್ಥರು ದಸರಾ ಬಳಿಕ ಖರೀದಿಸುವುದಾಗಿ ತಿಳಿಸಿದ್ದಾರೆ. ಎಂಟು ಟನ್ಗಿಂತ ಅಧಿಕ ಮೀನು ಫಸಲು ಬರಲಿದ್ದು, ಪ್ರತಿ ಕೆಜಿಗೆ 320 ರೂ.ನಂತೆ ಅಂದಾಜು 24 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಕಳೆದ ಜೂನ್ ಮತ್ತು ಜುಲೈನಲ್ಲಿ 950 ಕೆಜಿ ಮೀನು ಮಾರಾಟ ಮಾಡಿದ್ದು, 2.40 ಲಕ್ಷ ರೂ. ಬಂದಿದೆ ಎನ್ನುತ್ತಾರೆ ಮೀನು ಕೃಷಿಕ ವಿಜಯ ಹಿರೇಮಠ. ನೈಸರ್ಗಿಕ ಮೀನು ಸಾಕಣೆ: ಜಮೀನಿನಲ್ಲಿ ಮೂರುವರೆ ವೀಸ್ತೀರ್ಣದ ಕೆರೆ ಇದ್ದು, ಇದರಲ್ಲಿ 2 ಕೋಟಿ ಲೀಟರ್ ನೀರು ಸಂಗ್ರಹಿಸಲಾಗುವುದು. ಅಲ್ಲಿ ಕೂಡ ಪ್ರತಿವರ್ಷ 20 ಸಾವಿರ ಮೀನು ಮರಿಗಳನ್ನು ಸ್ಥಳಿಯ ತೋಟಗಾರಿಕೆ ಇಲಾಖೆಯಿಂದ ತಂದು ಬಿಡಲಾಗುತ್ತದೆ. ಇಲ್ಲಿ ಕಾಟ್ಲಾ, ರೋಹು, ಗೌರಿ, ಕಾಮನ್ಕಾರ್ಡ್, ಪಿಲಾಪಿಯಾ ತಳಿಯ ಮರಿಗಳನ್ನು ಬಿಡಲಾಗುತ್ತದೆ. ಅದರಿಂದ ವರ್ಷಕ್ಕೆ ಅಂದಾಜು 8ರಿಂದ 10 ಲಕ್ಷ ರೂ. ಆದಾಯವಿದೆ. 2024ರಲ್ಲಿ ಲಕ್ಷ ರೂ. ಆದಾಯ: ಮೊದಲ ಬಾರಿಗೆ 2024ರ ಮಾರ್ಚ್ನಲ್ಲಿ 10 ಸಾವಿರ ಮೀನು ಮರಿ ಸಾಕಾಣಿಯಿಂದ ಎಲ್ಲ ಖರ್ಚು ಕಳೆದ 1 ಲಕ್ಷ ರೂ. ಆದಾಯ ಬಂದಿದೆ. ಸಮಗ್ರ ಕೃಷಿ: ಮೀನುಗಾರಿಕೆ ಜತೆಗೆ 20 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡಲಾಗುತ್ತಿದೆ. 30 ಕುರಿ ಮತ್ತು 150 ಕೋಳಿ ಸಾಕಣೆ, 100 ಪೇರಲ ಗಿಡ, 30 ಚಿಕ್ಕು ಗಿಡ, ಲಿಂಬೆ ಹಣ್ಣಿನ ಗಿಡ, 280 ಮಹಾಗನಿ ಗಿಡ ನೆಡಲಾಗಿದೆ. 5 ಎಕರೆಯಲ್ಲಿ ತಾಳೆ ಗಿಡ ನಾಟಿ ಮಾಡಿದ್ದು, 2026ರ ಮಾರ್ಚ್ನಿಂದ ತಾಳೆ ಫಸಲು ಕೈಸೇರಲಿದೆ. ಇನ್ನು ಕಡಲೆ, ಹೆಸರು, ಗೋವಿನಜೋಳ ಬೆಳೆಯಲಾಗಿದೆ.
ಕೃಷಿಯಲ್ಲಿ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ನಮ್ಮ ಹೊಲದಲ್ಲಿದ್ದ ಕೆರೆ ನೀರು ಬಳಸಿ ಮೀನು ಸಾಕಾಣಿಕೆ ಮಾಡುತ್ತಿದ್ದೇನೆ. ಇದರಿಂದ ಈ ವರ್ಷ 24 ಲಕ್ಷ ರೂ. ಬರಲಿದೆ. ಕೆರೆ ಮೀನು ಸಾಕಣೆಯಿಂದ ವರ್ಷಕ್ಕೆ 10 ಲಕ್ಷ ರೂ., ಇನ್ನು ಸಮಗ್ರ ಕೃಷಿಯಿಂದ 6 ಲಕ್ಷ ರೂ., ಹೀಗೆ ಅಂದಾಜು 40 ಲಕ್ಷ ರೂ. ಆದಾಯ ಸಿಗುವ ನಿರೀಕ್ಷ ಇದೆ. ಮುಂದಿನ ವರ್ಷ ಇನ್ನೊಂದು ಮೀನು ಕೃಷಿ ಹೊಂಡ ನಿರ್ವಿುಸಿ ಮೀನು ಸಾಕಣೆ ಹೆಚ್ಚಿಸುವ ಉದ್ದೇಶವಿದೆ. | ವಿಜಯ ಹಿರೇಮಠ, ಮೀನು ಕೃಷಿಕ, ಗದಗ ಗದಗನ ವಿಜಯ ಹಿರೇಮಠ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಮೀನು ಕೃಷಿಗಾಗಿ 14 ಲಕ್ಷ ರೂ. ವೆಚ್ಚದಲ್ಲಿ 12 ಗುಂಟೆ ಜಾಗದಲ್ಲಿ ಮೀನು ಕೃಷಿ ಹೊಂಡ ನಿರ್ವಿುಸಿದ್ದಾರೆ. ಅವರಿಗೆ 2023-24ನೇ ಸಾಲಿನ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಬಯೋ ಫ್ಲಾಕ್ ಪಾಂಡ್ ಮೀನು ಕೃಷಿ ಘಟಕ ನಿರ್ವಣಕ್ಕೆ 8.40 ಲಕ್ಷ ರೂ. ಸಹಾಯಧನ ನೀಡಲಾಗಿದೆ. | ನಾಗರಾಜ ಚಲ್ಲಜ್ಜಿಮನೆ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು, ಗದಗ