

ಹುಬ್ಬಳ್ಳಿ : ರಕ್ತದ ಕೊರತೆ ನೀಗಿಸುವುದಕ್ಕಾಗಿ ಹುಬ್ಬಳ್ಳಿಯ ರಾಷ್ಟ್ರೆೊತ್ಥಾನ ರಕ್ತಕೇಂದ್ರದ ವತಿಯಿಂದ ಪ್ರತಿ ಸೋಮವಾರ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದ್ದು, ವಾರದ ಇನ್ನುಳಿದ ದಿನಗಳಲ್ಲಿಯೂ ಹುಬ್ಬಳ್ಳಿ-ಧಾರವಾಡದ ವಿವಿಧ ಸ್ಥಳಗಳಲ್ಲಿ ರಕ್ತದಾನ ಸಂಗ್ರಹ ನಡೆಯಲಿದೆ.
ಸೋಮವಾರದಂದು ಶ್ರೀ ಸಿದ್ಧಾರೂಠ ಮಠದ ಆವರಣದಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಘಂಟಿಕೇರಿ ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಮಠದಿಂದ ಈಗಾಗಲೇ ಹಲವಾರು ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ. ಮಠಕ್ಕೆ ಆಗಮಿಸುವ ಭಕ್ತರು ರಕ್ತದಾನ ಮಾಡುವ ಮೂಲಕ ಸಾಮಾಜಿಕ ಕಾರ್ಯಗಳಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ಲೋಕಹಿತ ಟ್ರಸ್ಟ್ ಕಾರ್ಯದರ್ಶಿ ಶ್ರೀಧರ ನಾಡಿಗೇರ ಮಾತನಾಡಿ, ಸಂಘ -ಸಂಸ್ಥೆಗಳು, ಶಾಲಾ-ಕಾಲೇಜುಗಳು ಮತ್ತು ಕಂಪನಿಗಳ ಸಮಾರಂಭಗಳಲ್ಲಿ, ಗಣ್ಯ ವ್ಯಕ್ಕಿಗಳ ಹುಟ್ಟುಹಬ್ಬದ ಸಂದರ್ಭ, ರಾಷ್ಟ್ರಿಯ ವಿಷೇಶ ಹಬ್ಬದ ದಿನಗಳಲ್ಲಿ, ಬ್ಯಾಂಕ್ಗಳ ಕಾರ್ಯಕ್ರಮಗಳ ಸಂದರ್ಭದಲ್ಲಿ, ಜನ್ಮದಿನ, ವಿವಾಹ ವಾರ್ಷಿಕೊತ್ಸವದ ದಿನಗಳಂದು ಅನೇಕರು ರಕ್ತದಾನ ಮಾಡುತ್ತಿದ್ದಾರೆ. ಮತ್ತಷ್ಟು ಜನರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು ಎಂದು ಕೋರಿದರು.
ಶ್ರೀಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ ಮಾತನಾಡಿದರು. ರಕ್ತಕೇಂದ್ರದ ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ನಾಯಕ, ಉದ್ಯಮಿ ರಮೇಶ ಭಾಪನಾ, ರಕ್ತಕೇಂದ್ರದ ವೈದ್ಯಾಧಿಕಾರಿ ಡಾ. ಸಂಗೊಳ್ಳಿ ಎಸ್.ಎಸ್., ಮುಖ್ಯ ತಂತ್ರಜ್ಞೆ ಭಾರತಿ ಶಲಕೆ, ಡಾ. ಬಿ.ಬಿ. ಪಾಟೀಲ, ಸಂಜೀವ ಜೋಶಿ, ರೇವಣಸಿದ್ದಪ್ಪ ಅಂಗಡಿ, ಎಸ್.ಕೆ. ಹಳ್ಯಾಳ, ಬೀರಪ್ಪ ಕುರಿ ಹಾಗೂ ಇತರರು ಇದ್ದರು. ವಿನೋದ ಪಟ್ವಾ ಸ್ವಾಗತಿಸಿದರು. ಗುರು ಬನ್ನಿಕೊಪ್ಪ ನಿರೂಪಿಸಿದರು. ಕಿರಣ ಗಡ ವಂದಿಸಿದರು.
ಬಾಕ್ಸ್
ರಕ್ತದಾನ ನಡೆಯುವ ಸ್ಥಳ
ಪ್ರತಿ ಸೋಮವಾರ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಮಠ, ಮಂಗಳವಾರದಂದು ಧಾರವಾಡದ ಕೆಸಿಡಿ ಸರ್ಕಲ್, ಬುಧವಾರ ಹುಬ್ಬಳ್ಳಿಯ ಎಸ್ಬಿಐ ಜೋನಲ್ ಆಫೀಸ್, ಗುರುವಾರ ಧಾರವಾಡದ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಹತ್ತಿರ, ಶುಕ್ರವಾರ ಹುಬ್ಬಳ್ಳಿ ವಿದ್ಯಾನಗರದ ದೇಸಾಯಿ ಮೋಟರ್ಸ್ ಹತ್ತಿರ, ಶನಿವಾರದ ಒಂದು ವಾರ ಧಾರವಾಡ ನುಗ್ಗಿಕೇರಿಯ ಶ್ರೀ ಹನುಮಂತ ದೇವರ ದೇವಸ್ಥಾನ ಹಾಗೂ ಮತ್ತೊಂದು ವಾರ ಹುಬ್ಬಳ್ಳಿ ಗೋಕುಲ ಧಾರಾವತಿಯ ಶ್ರೀ ಹನುಮಂತ ದೇವರ ದೇವಸ್ಥಾನ.
ಸುಸಜ್ಜಿತ ವಾಹನದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ರಕ್ತದಾನ ಶಿಬಿರ ನಡೆಯಲಿದೆ.