ಕೆಂಪು ಪೇರಲ ಲಕ್ಷ ಲಕ್ಷ ರೂಪಾಯಿ ಆದಾಯ

9-GUVA STORY
Published on

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ

ಕೃಷಿ ಮತ್ತು ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಒಬ್ಬರು ನಿವೃತ್ತಿ ಬಳಿಕ ಸುಧಾರಿತ ಹೊಸ ತಳಿ ‘ರೆಡ್ ಡೈಮಂಡ್’ ಪೇರಲ ಹಣ್ಣು ಬೆಳೆದು ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಮೂಲತಃ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದವರು, ಸದ್ಯ ಧಾರವಾಡದಲ್ಲಿರುವ ಕೃಷಿ ಪದವೀಧರ ಸಿ.ಕೆ. ರಾಜೂರ ಅವರು ಜಿಲ್ಲೆಯಲ್ಲಿ ಮೊದಲ ಬಾರಿಗೆ ‘ಡೈಮಂಡ್’ ಪೇರಲ ಹಣ್ಣು ಬೆಳೆದು ಯಶ ಕಂಡಿದ್ದಾರೆ.

ಧಾರವಾಡ ತಾಲೂಕಿನ ಸಲಕಿನಕೊಪ್ಪದಲ್ಲಿ 2012ರಲ್ಲಿ 4 ಎಕರೆ ಜಮೀನು ಖರೀದಿಸಿದ್ದ ಇವರು ಆಗಿನಿಂದಲೇ ಕೃಷಿಯಲ್ಲಿ ತೊಡಗಿದ್ದಾರೆ. 2022ರ ಜುಲೈನಲ್ಲಿ ನಿವೃತ್ತಿ ಹೊಂದಿದ ಬಳಿಕ ಸಂಪೂರ್ಣವಾಗಿ ಸಮಗ್ರ ಕೃಷಿ ಮಾಡುತ್ತಿದ್ದಾರೆ.

2023ರ ಸೆಪ್ಟೆಂಬರ್​ನಲ್ಲಿ ಗುಜರಾತ್​ನಿಂದ 1 ಸಾವಿರ ಸುಧಾರಿತ ಹೊಸ ತಳಿ ರೆಡ್ ಡೈಮಂಡ್ ಪೇರಲ ಸಸಿಗಳನ್ನು ತಂದು ಎರಡು ಎಕರೆಯಲ್ಲಿ 8/8 ಅಂತರದಲ್ಲಿ ನಾಟಿ ಮಾಡಿದ್ದಾರೆ. ಹೊಲದಲ್ಲಿ 2 ಬೋರ್​ವೆಲ್​ಗಳಿದ್ದು, ಹನಿ ನೀರಾವರಿ ಮೂಲಕ ಬೆಳೆ ಬೆಳೆಯುತ್ತಿದ್ದಾರೆ. 2024ರ ನವೆಂಬರ್​ನಲ್ಲಿ ಮೊದಲ ಕಟಾವು ಮಾಡಿದ್ದು ಆಗ ಒಂದೂವರೆ ಟನ್ ಇಳುವರಿ ಬಂದಿತ್ತು. 2025ರ ಮಾರ್ಚ್- ಏಪ್ರಿಲ್​ನಲ್ಲಿ 2ನೇ ಕಟಾವು ಮಾಡಿದ್ದು, 2 ಟನ್ ಇಳುವರಿ ಬಂದಿತ್ತು. ಆಗ 1 ಕೆಜಿಗೆ 120 ರೂ.ಗಳಂತೆ ಮಾರಾಟ ಮಾಡಲಾಗಿದ್ದು 2.40 ಲಕ್ಷ ರೂ. ಆದಾಯ ಬಂದಿದೆ.

2025ರ ಸೆಪ್ಟೆಂಬರ್​ನಲ್ಲಿ 3ನೇ ಕಟಾವು ಮಾಡಲಾಗುವುದು. ಸದ್ಯ ಪೇರಲ ಹಣ್ಣುಗಳು ನಿಂಬೆ ಹಣ್ಣಿನ ಗಾತ್ರದಲ್ಲಿದ್ದು, ಸೆಪ್ಟೆಂಬರ್​ನಲ್ಲಿ ಅಂದಾಜು 4 ಟನ್ ಇಳುವರಿ ಬರಲಿದ್ದು, 5 ಲಕ್ಷ ರೂಪಾಯಿ ಆದಾಯದ ನಿರೀಕ್ಷೆ ಇದೆ.

ಪೇರಲ ಗಿಡಗಳು ನಾಲ್ಕು ವರ್ಷದ ನಂತರ ಪೂರ್ಣ ಪ್ರಮಾಣದಲ್ಲಿ ವರ್ಷಕ್ಕೆ ಎರಡು ಬಾರಿ ಇಳುವರಿ ನೀಡುತ್ತವೆ. ಆಗ ಪ್ರತಿ ಗಿಡದಿಂದ 25ರಿಂದ 30 ಕೆಜಿ ಲೆಕ್ಕದಲ್ಲಿ 25 ಟನ್ ಇಳುವರಿ ಬರುತ್ತದೆ. ಪ್ರತಿ ಕೆಜಿಗೆ 120 ರೂ.ನಂತೆ ಮಾರಾಟ ಮಾಡಿದರೆ, 30 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇದೆ. ಅದರಲ್ಲಿ ನಿರ್ವಹಣೆ ಖರ್ಚು 15 ಲಕ್ಷ ರೂ. ಖರ್ಚು ಕಳೆದು 15 ಲಕ್ಷ ರೂ.ವರೆಗೆ ಆದಾಯ ಗಳಿಸಬಹುದು.

ಕೀಟಬಾಧೆ ರಕ್ಷಣೆಗೆ ಫ್ರುಟ್ ಬ್ಯಾಗ್ : ತೋಟದ ಪೇರಲ ಗಿಡದಲ್ಲಿರುವ ಪ್ರತಿ ಹಣ್ಣುಗಳನ್ನು ಕೀಟಬಾಧೆಯಿಂದ ರಕ್ಷಿಸಲು (ಫ್ರುಟ್ ಬ್ಯಾಗ್) ಕಟ್ಟಲಾಗಿದೆ. ಅತಿಯಾದ ಸೂರ್ಯಕಿರಣದಿಂದ ಹಣ್ಣುಗಳನ್ನು ಕಾಪಾಡಲು ಹಣ್ಣಿನ ರಕ್ಷಣಾ ಚೀಲಗಳು ಸಹಕಾರಿಯಾಗುತ್ತವೆ.

ತುಂಬಾ ರುಚಿ ಇದೆ ಡೈಮಂಡ್:  ಮಾರುಕಟ್ಟೆಯ ಸಮೀಕ್ಷೆ ಪ್ರಕಾರ ರೆಡ್ ಡೈಮಂಡ್ ಪೇರಲ ಇತರ ತಳಿಗಿಂತಲೂ ಹೆಚ್ಚು ಕೆಂಪು ಮಿಶ್ರಿತ ಬಣ್ಣ ಹೊಂದಿದ್ದು, ಹಣ್ಣು ಗರಿಗರಿಯಾಗಿದ್ದು (ಕ್ರಿಸ್ಪಿ) ರುಚಿಯಲ್ಲಿಯೂ ಕೂಡ ತನ್ನದೇಯಾದ ವೈಶಿಷ್ಟ್ಯ ಹೊಂದಿದೆ.

ಪೇರಲ ಹಣ್ಣು ಆರೋಗ್ಯಕ್ಕೆ ಹಿತ: ಪೇರಲ ಹಣ್ಣು ಸದೃಢವಾದ ಬೆಳೆ, ಇದು ಹೆಚ್ಚು ನೀರಾದರೂ ತಡೆದುಕೊಳ್ಳುತ್ತದೆ. ಕಡಿಮೆ ನೀರಾದರೂ ಗಿಡಗಳು ಬದುಕುತ್ತವೆ. ಅತಿ ಹೆಚ್ಚು ಸಾಮಾನ್ಯ ಜನರು ತಿನ್ನುವ ಹಣ್ಣು ಇದಾಗಿದೆ. ಈ ಹಣ್ಣಿನಲ್ಲಿ ರೋಗ ನಿರೋಧಕ ಗುಣಗಳು ತುಂಬಾ ಇವೆ. ವಿಶೇಷವಾಗಿ ಸಕ್ಕರೆ ಕಾಯಿಲೆ ಉಳ್ಳವರಿಗೆ ಈ ಹಣ್ಣು ರಾಮಬಾಣವಿದ್ದಂತೆ. ಹೀಗಾಗಿ, ಹಿಂದೆಂದಿಗಿಂತಲೂ ಇತ್ತೀಚಿನ ವರ್ಷಗಳಲ್ಲಿ ಪೇರಲ ಹಣ್ಣಿಗೆ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಬಂದಿದೆ.

ಮಾರುಕಟ್ಟೆ ವ್ಯವಸ್ಥೆ: ಸಿ.ಕೆ. ರಾಜೂರ ಅವರು ತಾವು ಬೆಳೆದ ಪೇರಲ ಹಣ್ಣುಗಳನ್ನು ಮಾರಾಟ ಮಾಡಲು ತಮ್ಮದೇಯಾದ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ‘ಕನ್ಸ್ಯುಮರ್ ಫೊರಂ’ ಹೆಸರಿನಲ್ಲಿ ವಾಟ್ಸ್ ಆಪ್ ಗ್ರುಪ್ ನಿರ್ವಿುಸಿದ್ದಾರೆ. ಈ ಗ್ರುಪ್ ಮೂಲಕ ಅನೇಕ ಗ್ರಾಹಕರನ್ನು ಸೆಳೆದಿದ್ದು, ಅಲ್ಲಿಂದಲೇ ಗ್ರಾಹಕರಿಂದ ಆರ್ಡ್​ರ್ ಪಡೆದು ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಇದರ ಜತೆಗೆ ವಿವಿಧ ಸಂಸ್ಥೆಗಳಾದ ಧಾರವಾಡ ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ಗ್ರಾಮೀಣ ಬ್ಯಾಂಕ್, ಇನ್ನಿತರ ಬ್ಯಾಂಕ್, ಎಲ್​ಐಸಿ ಕಚೇರಿಗೂ ಹಣ್ಣುಗಳನ್ನು ಸರಬರಾಜು ಮಾಡುತ್ತಾರೆ.

ಅಧಿಕಾರಿಗಳ ಮಾರ್ಗದರ್ಶನ: ಧಾರವಾಡ ಜಿಲ್ಲೆಯಲ್ಲಿ ರೆಡ್ ಡೈಮಂಡ್ ಪೇರಲ ತಳಿಯನ್ನು ಮೊದಲಿಗರಾಗಿ ಬೆಳೆದು ಯಶ ಕಂಡಿರುವುದರಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಧಾರವಾಡ ಕೃಷಿ ವಿವಿ ಸಿಬ್ಬಂದಿ, ಸ್ನೇಹಿತರು ನೀಡಿದ ಸಲಹೆ ಮತ್ತು ಮಾರ್ಗದರ್ಶನವೂ ಇದೆ ಎನ್ನುತ್ತಾರೆ ಬೆಳೆಗಾರ ಸಿ.ಕೆ. ರಾಜೂರ.

ಸಮಗ್ರ ಕೃಷಿ

4 ಎಕರೆ ಜಮೀನಿನ ಸುತ್ತ ಬದುವಿನಲ್ಲಿ 200 ಸಾಗವಾನಿ ಗಿಡಗಳು, 80 ಧಾರವಾಡ ಆಪೂಸ್ ಮಾವಿನ ಗಿಡಗಳು, 70 ತೆಂಗಿನ ಗಿಡಗಳು, 120 ಕರಿಬೇವು ಗಿಡ, ಏಲಕ್ಕಿ ಬಾಳೆ, ಆರು ಚಿಕ್ಕು ಹಣ್ಣಿನ ಗಿಡ, 6 ನೇರಳೆ ಹಣ್ಣಿನ ಗಿಡ, 10 ಪಪ್ಪಾಯ ಗಿಡ, 5 ಹಲಸಿನ ಗಿಡ, ಎರಡು (ಮಸಾಲೆ) ದಾಲ್ಚಿನ್ನಿ ಚಕ್ಕೆ ಗಿಡ, 10 ನುಗ್ಗೆ ಗಿಡ, 10 ಗುಂಟೆಯಲ್ಲಿ ಚೆಂಡು ಹೂವು ಕೃಷಿ, 8 ಬೇವಿನ ಗಿಡಗಳನ್ನು ಬೆಳೆಸಿದ್ದು, ವಿವಿಧ ಗಿಡ ಮರಗಳೊಂದಿಗೆ ಸಮಗ್ರ ಕೃಷಿ ಮಾಡಿದ್ದಾರೆ.

ಕೃಷಿ ಹೊಂಡ : ಮಳೆ ಆಧಾರಿತ ನೀರು ಸಂಗ್ರಹಿಸಲು 45 ಅಡಿ ಅಗಲ, 45 ಉದ್ದ, 20 ಅಡಿ ಆಳದ ಒಂದು ಕೃಷಿ ಹೊಂಡ ನಿರ್ವಿುಸಿದ್ದು, ಅದಕ್ಕೆ ಪ್ಲಾಸ್ಟಿಕ್ ಪಾಲಿಲೈನಿಂಗ್ ಅಳವಡಿಸಲಾಗಿದೆ. ಜಮೀನಿನ ಸುತ್ತ ತಂತಿ ಬೇಲಿ ಹಾಕಲಾಗಿದ್ದು, ಎರಡು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಹೊಲದ ಸುತ್ತ ಹೊರಗಿನಿಂದ ಬರುವ ಹೆಚ್ಚಿನ ನೀರನ್ನು ತಡೆಗಟ್ಟಲು ಬಸಿ ಕಾಲುವೆ ನಿರ್ವಿುಸಲಾಗಿದೆ.

ಗುಲಾಬಿಯಲ್ಲಿ ಉತ್ತಮ ಆದಾಯ: 2023ರ ಜೂನ್​ನಲ್ಲಿ ಜೋಡು ಸಾಲು ಪದ್ಧತಿಯಲ್ಲಿ 26 ಗುಂಟೆ ಜಮೀನಿನಲ್ಲಿ 10 ಸಾವಿರ ಬ್ಲ್ಯಾಕ್ ಮಾಜಿಕ್ ತಳಿಯ ಗುಲಾಬಿ ಹೂವುಗಳ ಸಸಿಗಳನ್ನು ನಾಟಿ ಮಾಡಲಾಗಿದೆ. 3 ತಿಂಗಳಿಗೆ ಹೂವುಗಳ ಕಟಾವು ಆರಂಭವಾಗಿದ್ದು, ಅಲ್ಲಿಂದ ಈವರೆಗೂ ಪ್ರತಿದಿನ 60 ರಿಂದ 70 ಕಟ್ಟುಗಳನ್ನು ಮಾರಾಟ ಮಾಡಲಾಗುತ್ತಿದೆ. ಎರಡು ವರ್ಷದಲ್ಲಿ ಗುಲಾಬಿ ಹೂವಿನಿಂದ 10 ಲಕ್ಷ ರೂ.ಗೂ ಅಧಿಕ ಆದಾಯವಾಗಿದೆ. ಇನ್ನು ಚೆಂಡು ಹೂವುಗಳಿಂದ 40 ಸಾವಿರ ರೂ., ಆಪೂಸ್ ಮಾವಿನ ಹಣ್ಣು ಮಾರಾಟದಿಂದ 1 ಲಕ್ಷ ರೂ., ಆದಾಯ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net