ಸೀತಾಫಲ ಬೆಳೆ ಆದಾಯದ ಹೊಳೆ

seethaphal
Published on

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ ಹಿಂದೆಲ್ಲಾ ಒಂದೇ ಬೆಳೆ ಬೆಳೆದು ಕೈಸುಟ್ಟುಕೊಳ್ಳುತ್ತಿದ್ದ ರೈತರು ಇತ್ತೀಚೆಗೆ ತರಹೇವಾರಿ ಹಣ್ಣು, ತರಕಾರಿ, ಹೂವಿನ ಬೆಳೆ ಬೆಳೆಯಲು ಮುಂದಾಗಿ ಕೃಷಿಯನ್ನು ಲಾಭದಾಯವಾಗಿಸಿ ಕೊಂಡಿದ್ದಾರೆ. ಕೆಲವರು ತೋಟಗಾರಿಕಾ ಬೆಳೆಯತ್ತ ಆಸಕ್ತಿ ತೋರಿದರೆ, ಮತ್ತೆ ಕೆಲವರು ತರಕಾರಿ, ಹೂವಿನ ಬೆಳೆಯತ್ತ ಆಕರ್ಷಿತರಾಗಿದ್ದಾರೆ. ಇನ್ನೂ ಕೆಲವರು ಮಿಶ್ರ ಬೆಳೆ ಬೆಳೆದು ಬದುಕು ಬಂಗಾರವಾಗಿಸಿಕೊಂಡಿದ್ದಾರೆ. ಈ ಪೈಕಿ ಧಾರವಾಡ ಜಿಲ್ಲೆಯ ರೈತರೊಬ್ಬರು ಮೊದಲ ಬಾರಿಗೆ ಹೈಬ್ರಿಡ್ ತಳಿಯ ಸೀತಾಫಲ ಬೆಳೆದು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಧಾರವಾಡ ತಾಲೂಕಿನ ದಂಡಿಕೊಪ್ಪ-ಗೋವನಕೊಪ್ಪ ಅವಳಿ ಗ್ರಾಮದ ರೈತ ರವಿಚಂದ್ರ ಕೃಷ್ಣಾ ಭೋಸಲೆ 8 ಎಕರೆಯಲ್ಲಿ ಸೀತಾಫಲ ಬೆಳೆದಿದ್ದಾರೆ. 2017-18ರಲ್ಲಿ ಮಹಾರಾಷ್ಟ್ರದ ಸೊಲ್ಲಾಪುರದಿಂದ ತಲಾ ಸಸಿಗೆ 90 ರೂ. ಕೊಟ್ಟು 340 ಸಸಿಗಳನ್ನು ತಂದು ನಾಟಿ ಮಾಡಿದ್ದರು. ಗಿಡದಿಂದ ಗಿಡಕ್ಕೆ 8 ಅಡಿ, ಸಾಲಿನಿಂದ ಸಾಲಿಗೆ 16 ಅಡಿ ಅಂತರದಲ್ಲಿ ನಾಟಿ ಮಾಡಿದ್ದರು. 2023ರಲ್ಲಿ ಗಿಡಗಳು ಕಾಯಿ ಬಿಡಲು ಆರಂಭಿಸಿದವು. ಮೊದಲ ಬಾರಿ 2023ರಲ್ಲಿ 5 ಲಕ್ಷ ರೂ., 2024ರಲ್ಲಿ 14 ಲಕ್ಷ ರೂ. ಆದಾಯ ಬಂದಿತು. 2025ರಲ್ಲಿ 16ರಿಂದ 18 ಲಕ್ಷ ರೂ. ಆದಾಯ ನಿರೀಕ್ಷೆ ಇದೆ ಎನ್ನುತ್ತಾರೆ ರವಿಚಂದ್ರ ಭೋಸಲೆ. 3,400 ಕೆಜಿ. ಇಳುವರಿ: ತೋಟದಲ್ಲಿ 340 ಸೀತಾಫಲ ಗಿಡಗಳಿದ್ದು, ಒಂದು ಗಿಡದಿಂದ ಅಂದಾಜು 10 ಕೆಜಿಯಂತೆ ವರ್ಷಕ್ಕೆ ಒಟ್ಟು 3-4 ಟನ್ ಇಳುವರಿ ತೆಗೆಯುತ್ತಿದ್ದಾರೆ. ಹಣ್ಣು ರುಚಿಯಾಗಿದ್ದು, ತಿರುಳು (ಪಲ್ಪ್) ದಪ್ಪ ಇದೆ. ಕಟಾವು ಮಾಡಿದ ಬಳಿಕ 1 ವಾರ ತಾಳಿಕೆ ಬರುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. 1 ಕೆಜಿಗೆ ದರ ಕನಿಷ್ಠ 20 ರೂ.ಗಳಿಂದ ಗರಿಷ್ಠ 120 ರೂ.ವರೆಗೆ ಮಾರಾಟವಾಗುತ್ತದೆ. ಸದ್ಯ ಹುಬ್ಬಳ್ಳಿ- ಧಾರವಾಡ ಮಾರುಕಟ್ಟೆಗೆ ಕಳುಹಿಸಲಾಗುತ್ತಿದೆ. ಒಟ್ಟು 31 ಎಕರೆ ಜಮೀನು ಹೊಂದಿರುವ ರವಿಚಂದ್ರ 8ನೇ ತರಗತಿ ಓದಿದ ನಂತರ ಕೃಷಿ-ತೋಟಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮೆಣಸಿನಕಾಯಿಯಲ್ಲಿ 8 ಲಕ್ಷ ರೂ. ಲಾಭ: 10 ಎಕರೆಯಲ್ಲಿ ಹಸಿ ಮೆಣಸಿನಕಾಯಿ ಬೆಳೆಯಲಾಗಿದ್ದು, ಈ ವರ್ಷ 15 ಲಕ್ಷ ರೂ. ಆದಾಯ ಗಳಿಸಿದ್ದು, 7 ಲಕ್ಷ ರೂ. ಖರ್ಚು ಮಾಡಿದ್ದಾರೆ. ಹತ್ತು ಎಕರೆಗೆ 80 ಸಾವಿರ ಸಸಿ ನಾಟಿ ಮಾಡಲಾಗಿದೆ. 4 ಎಕರೆಯಲ್ಲಿ ಜಿ-9 ಬಾಳೆ ಬೆಳೆದಿದ್ದಾರೆ. 6 ಸಾವಿರ ಅಗಿಗಳನ್ನು 2024ರ ಜುಲೈನಲ್ಲಿ ನಾಟಿ ಮಾಡಿದ್ದರು. ಇದು 11 ತಿಂಗಳ ಬೆಳೆಯಾಗಿದ್ದು, ಖರ್ಚು ಕಳೆದು ಅಂದಾಜು 4 ಲಕ್ಷ ರೂ. ಆದಾಯ ಬರಲಿದೆ ಎನ್ನುತ್ತಾರೆ ರವಿಚಂದ್ರ. ಮಿಶ್ರ ಬೆಳೆ: 6 ಎಕರೆಯಲ್ಲಿ ಸೋಯಾಬೀನ್ ಬೆಳೆಯಲಾಗಿದೆ. 2 ಎಕರೆಯಲ್ಲಿ ಸ್ವೀಟ್ ಕಾರ್ನ್, 2 ಎಕರೆಯಲ್ಲಿ ಟೊಮ್ಯಾಟೊ ಬೆಳೆಯುತ್ತಿದ್ದಾರೆ. ಜಮೀನಿನ ಬದುವಿನಲ್ಲಿ 700 ಮಹಾಗನಿ, 400 ಸಾಗವಾನಿ ಸಸಿ ನೆಟ್ಟಿದ್ದಾರೆ. ಕಳೆದ ವರ್ಷ ಹೆಚ್ಚು ಮಳೆಯಾಗಿತ್ತು. ಏಲಕ್ಕಿ, ಬಾಳೆ ಗಾಳಿ-ಮಳೆಯಿಂದ ಹಾನಿಯಾಯಿತು. ರೈತರು ಯಾವುದಕ್ಕೂ ಹೆದರದೆ ಕೃಷಿಯಲ್ಲಿ ಮುಂದುವರಿಯಬೇಕು. ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಕೈಹಿಡಿಯುತ್ತದೆ ಎಂಬ ನಂಬಿಕೆ ರವಿಚಂದ್ರ ಅವರದು.

ಸಾಮಾನ್ಯವಾಗಿ ಒಣಭೂಮಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಸೀತಾಫಲ ಬೆಳೆಯಲಾಗುತ್ತದೆ. ಜಿಲ್ಲೆಯ ರೈತರೊಬ್ಬರು ಎರೆ ಭೂಮಿಯಲ್ಲಿ ಬೆಳೆದು ಯಶ ಕಂಡಿದ್ದಾರೆ. ಇದು ಉತ್ತಮ ಪ್ರಯತ್ನವಾಗಿದೆ. ಒಮ್ಮೆ ಇಳುವರಿ ತೆಗೆದ ಬಳಿಕ ಗಿಡಗಳನ್ನು ಚಾಟ್ನಿ (ಆಯ್ದ ಟೊಂಗೆಗಳನ್ನು ಕತ್ತರಿಸುವುದು- ಪ್ರೂನಿಂಗ್ ಕಟಾವು) ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ವರ್ಷದಲ್ಲಿ ಎರಡು ಬಾರಿ ಇಳುವರಿ ಪಡೆಯಬಹುದು. ಮೊದಲ 3 ವರ್ಷ ಸಹಜ ಬೆಳೆ, 5ನೇ ವರ್ಷದಿಂದ ಆರ್ಥಿಕ ಬೆಳೆ ಬರುತ್ತದೆ. ಹೀಗೆ 25 ವರ್ಷಗಳವರೆಗೆ ಇಳುವರಿ ಸಿಗುತ್ತದೆ. ಕಾಶಿನಾಥ ಭದ್ರಣ್ಣವರ ಉಪನಿರ್ದೇಶಕ, ತೋಟಗಾರಿಕೆ ಇಲಾಖೆ ಧಾರವಾಡ ಕೃಷಿಯಲ್ಲಿ ಹೊಸತನ ಮಾಡುವ ಇಚ್ಛೆ ನನ್ನದು. ಹೀಗಾಗಿ, ತೋಟಗಾರಿಕೆ ಬೆಳೆ ಬೆಳೆಯುವ ಬೇರೆ ರಾಜ್ಯ, ಜಿಲ್ಲೆಗಳಿಗೆ ಭೇಟಿ ನೀಡಿ ಮೊದಲು ಅಧ್ಯಯನ ಮಾಡಿದ್ದೇನೆ. ನಂತರ ನಮ್ಮ ಭೂಮಿ, ಹವಾಮಾನಕ್ಕೆ ಒಗ್ಗುವ ಬೆಳೆ ಬೆಳೆದಿದ್ದೇನೆ. ಸೀತಾಫಲ, ಬಾಳೆ, ಹಸಿಮೆಣಸಿನಕಾಯಿ ಬೆಳೆದು ಆರ್ಥಿಕವಾಗಿ ಸದೃಢನಾಗಿದ್ದೇನೆ. ರವಿಚಂದ್ರ ಕೃಷ್ಣಾ ಭೋಸಲೆ, ದಂಡಿಕೊಪ್ಪ-ಗೋವನಕೊಪ್ಪ ಗ್ರಾಮದ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net