ಇನ್ನೂ ನಿಂತಿಲ್ಲ ಬಾಲ್ಯ ವಿವಾಹ

child marriage
Published on

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ ಎಷ್ಟೇ ಜಾಗೃತಿ ಮೂಡಿಸಿದರೂ ಬಾಲ್ಯ ವಿವಾಹ ಮಾತ್ರ ತಪ್ಪುತ್ತಿಲ್ಲ. ಸರ್ಕಾರ ಕಾನೂನು ಕಠಿಣಗೊಳಿಸಿದ್ದರೂ ಕೆಲವರು ಕ್ಯಾರೇ ಎನ್ನುತ್ತಿಲ್ಲ. ಧಾರವಾಡ ಜಿಲ್ಲೆಯಲ್ಲಿ 2024ರ ಏಪ್ರಿಲ್​ನಿಂದ 2025ರ ಜೂನ್​ವರೆಗೆ 15 ತಿಂಗಳಲ್ಲಿ ಮೂರು ಬಾಲ್ಯ ವಿವಾಹಗಳು ನಡೆದಿವೆ. ಒಟ್ಟು 47 ಬಾಲ್ಯವಿವಾಹದ ಯತ್ನಗಳು ನಡೆದಿದ್ದು, ಅವುಗಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತಡೆದಿದೆ. ಬಾಲ್ಯ ವಿವಾಹಕ್ಕೆ ಕಾರಣರಾದವರ ವಿರುದ್ಧ 23 ಎಫ್​ಐಆರ್ ದಾಖಲಿಸಲಾಗಿದೆ. 2024-25ನೇ ಸಾಲಿನಲ್ಲಿ 1 ಬಾಲ್ಯ ವಿವಾಹ ನಡೆದಿದ್ದು, ಬಾಲ್ಯ ವಿವಾಹದಿಂದ 28 ಅಪ್ರಾಪ್ತರನ್ನು ರಕ್ಷಿಸಲಾಗಿದೆ. ಆ ಪೈಕಿ ಪಾಲಕರ ಬಳಿ ಇರುವ 15 ಮಕ್ಕಳು ಶಾಲೆಗೆ, ಮೂವರು ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ. 10 ಜನ ಮನೆಯಲ್ಲಿದ್ದರೆ, ಒಬ್ಬರು ಪುನರ್ವಸತಿ ಕೇಂದ್ರದಲ್ಲಿದ್ದಾರೆ. 2025ರ ಏ. 1ರಿಂದ ಜೂನ್ 30ರವರೆಗೆ ಎರಡು ಬಾಲ್ಯ ವಿವಾಹ ನಡೆದಿವೆ. 16 ಬಾಲ್ಯ ವಿವಾಹ ತಡೆಯಲಾಗಿದೆ. ರಕ್ಷಿಸಲ್ಪಟ್ಟ 18 ಅಪ್ರಾಪ್ತರ ಪೈಕಿ ಐವರು ಮಕ್ಕಳು ಶಾಲೆಗೆ, ಇಬ್ಬರು ಕಾಲೇಜು ಶಿಕ್ಷಣ ಪಡೆಯುತ್ತಿದ್ದು, 11 ಮಕ್ಕಳು ಮನೆಯಲ್ಲಿದ್ದಾರೆ. 2023-24ರಲ್ಲಿ 35 ಪ್ರಕರಣ: 2023ರ ಏ. 1ರಿಂದ 2024ರ ಮಾ. 31ರವರೆಗೆ ಮೂರು ಬಾಲ್ಯ ವಿವಾಹ ನಡೆದಿವೆ. 34 ಬಾಲ್ಯವಿವಾಹ ತಡೆಯಲಾಗಿದ್ದು, ಅಪ್ರಾಪ್ತರು ಪಾಲಕರ ಬಳಿಯಿದ್ದು, ಕಾಲೇಜು ಶಿಕ್ಷಣ, ವೃತ್ತಿ ತರಬೇತಿ ಪಡೆಯುತ್ತಿದ್ದಾರೆ. 2023-24ರಲ್ಲಿ 9 ಎಫ್​ಐಆರ್ ದಾಖಲಿಸಲಾಗಿದೆ. ಯಾರಿಗೆಲ್ಲ ಶಿಕ್ಷೆ?: ಬಾಲ್ಯ ವಿವಾಹ ನೆರವೇರಿಸುವ, ನಡೆಸುವ, ನಿರ್ದೇಶಿಸುವ ಮತ್ತು ಪ್ರೇರೇಪಿಸುವ ವ್ಯಕ್ತಿ, ಸಂಸ್ಥೆಗಳು. ಮಗು ಬಾಲ್ಯವಿವಾಹಕ್ಕೆ ಒಳಪಟ್ಟರೆ ಮಗುವಿನ ಹೊಣೆ ಹೊತ್ತವರು, ಹೆತ್ತವರು, ಪೋಷಕರು, ಬಾಲ್ಯವಿವಾಹದಲ್ಲಿ ಹಾಜರಿದ್ದವರು, ಬಾಲ್ಯವಿವಾಹ ತಡೆಯಲು ನಿರ್ಲಕ್ಷ್ಯ ತೋರಿದವರು ಶಿಕ್ಷೆಗೆ ಗುರಿಯಾಗುತ್ತಾರೆ ಎನ್ನುತ್ತಾರೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು. 287 ಪೋಕ್ಸೋ ಪ್ರಕರಣ ಬಾಕಿ: 2023ರಿಂದ 2025ರ ಜೂ. 30ರವರೆಗೆ 266 ಪೋಕ್ಸೋ ಪ್ರಕರಣ ವಿಚಾರಣೆ ಹಂತದಲ್ಲಿದಲ್ಲಿವೆ. 56 ಕೇಸ್ ಕುರಿತು ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. ಒಟ್ಟು 322 ಪ್ರಕರಣಗಳ ಪೈಕಿ 35 ವಿಲೇವಾರಿಯಾಗಿದ್ದು, 2025ರ ಜೂ. 30ರವರೆಗೆ 287 ಪ್ರಕರಣ ಬಾಕಿ ಇವೆ.

ಬಾಲ್ಯ ವಿವಾಹ ನಡೆಸಿದ ಅಪರಾಧಕ್ಕೆ ಎರಡು ವರ್ಷ ಜೈಲು, 1 ಲಕ್ಷ ರೂ. ದಂಡ ಅಥವಾ ಎರಡೂ ಶಿಕ್ಷೆ ವಿಧಿಸಬಹುದಾಗಿದೆ. ಮಕ್ಕಳ ಪಾಲಕರು ಬಾಲ್ಯ ವಿವಾಹಕ್ಕೆ ಯತ್ನಿಸಬಾರದು. ಬಾಲ್ಯ ವಿವಾಹ ತಡೆ, ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ದೌರ್ಜನ್ಯ ಹಾಗೂ ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗಾಗಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. 2024-25ರಲ್ಲಿ 141 ಜಾಗೃತಿ ಕಾರ್ಯಕ್ರಮ ನಡೆಸಿದ್ದು, ಅವುಗಳಲ್ಲಿ 22 ಸಾವಿರ ಜನ ಭಾಗವಹಿಸಿದ್ದರು. 2025ರ ಏಪ್ರಿಲ್​ನಿಂದ ಜೂನ್ 30ರವರೆಗೆ 53 ಕಾರ್ಯಕ್ರಮ ಆಯೋಜಿಸಿದ್ದು, 2,800 ಜನ ಭಾಗವಹಿಸಿದ್ದರು. | ದೀಪಾ ಜಾವೂರ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ, ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net