

ಪ್ರಕಾಶ ಎಸ್. ಶೇಟ್ ಹುಬ್ಬಳ್ಳಿ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮೇಲಿಂದ ಮೇಲೆ ಧರ್ಮ ದಂಗಲ್ ನಡೆಯುತ್ತಿದೆ. ಸರ್ಕಾರ ಸೂಕ್ಷ್ಮ ವಿಚಾರಕ್ಕೆ ಕೈಹಾಕುವ ಮೂಲಕ ಸಾಲು ಸಾಲು ಎಡವಟ್ಟು ಮಾಡಿಕೊಳ್ಳುತ್ತಿದೆ. ಈ ದಂಗಲ್‌ಗೆ ಹುಬ್ಬಳ್ಳಿಯೇ ಕೇಂದ್ರ ಸ್ಥಾನವಾಗುತ್ತಿರುವುದು ಗಮನಾರ್ಹ.
ಹಳೇ ಹುಬ್ಬಳ್ಳಿ ಧ್ವಜ ಗಲಾಟೆ: ಯುವಕನೊಬ್ಬ ಮಸೀದಿಯ ಮೇಲೆ ಭಗವಾಧ್ವಜ ಹಾರಿಸಿದ ಚಿತ್ರವೊಂದನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ ವಿಚಾರವಾಗಿ 2022ರ ಏಪ್ರಿಲ್ 16ರಂದು ರಾತ್ರಿ ಹಳೇ ಹುಬ್ಬಳ್ಳಿ ಠಾಣೆ ಎದುರು ಕೋಮೊಂದಕ್ಕೆ ಸೇರಿದ್ದ ಜನರು ಗಲಾಟೆ ಮಾಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಯುವಕನನ್ನು ತಮಗೆ ಒಪ್ಪಿಸುವಂತೆ, ಠಾಣೆ ಮೇಲೆ ಕಲ್ಲಿನ ಸುರಿಮಳೆಗೈದಿದ್ದರು. ಆಸ್ಪತ್ರೆ, ದೇವಸ್ಥಾನ, ಮನೆಗಳ ಮೇಲೂ ಕಲ್ಲು ಎಸೆದು ಗಲಭೆ ಉಂಟು ಮಾಡಿದ್ದರು. ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿ ಸೇರಿ ಎಂಟು ಪೊಲೀಸರಿಗೆ ಗಾಯಗಳಾಗಿದ್ದವು. ಹತ್ತಕ್ಕೂ ಹೆಚ್ಚು ಪೊಲೀಸ್ ವಾಹನಗಳು ಜಖಂಗೊಂಡಿದ್ದವು. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಬೇಕಾಗಿ ಬಂದಿತ್ತು. ಈ ಘಟನೆ ನಡೆದಿದಾಗ ಬಿಜೆಪಿ ಸರ್ಕಾರವಿತ್ತು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಕೈಬಿಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಗಲಾಟೆಯಲ್ಲಿ ಭಾಗಿಯಾದವರು ಅಮಾಯಕರು ಎಂದು ಉಲ್ಲೇಖಿಸಲಾಗಿತ್ತು. ಡಿಕೆಶಿ ಅವರ ಪತ್ರ ಆಧರಿಸಿ ಪ್ರಕರಣದ ಮಾಹಿತಿಯನ್ನು ಸಲ್ಲಿಸುವಂತೆ 2023 ಸೆಪ್ಟೆಂಬರ್ 13 ರಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಿಗೆ ಎಡಿಜಿಪಿ ಸೂಚಿಸಿದ್ದರು. ಡಿಸಿಎಂ ಡಿ.ಕೆ. ಶಿವಕುಮಾರ ಅವರು ಗೃಹ ಇಲಾಖೆಗೆ ಪತ್ರ ಬರೆದಿರುವ ವಿಚಾರ ಸುದ್ದಿ ಆಗುತ್ತಿದಂತೆ ಬಿಜೆಪಿ ನಾಯಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಡಿ.ಕೆ. ಶಿವಕುಮಾರ ಬರೆದ ಪತ್ರವನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದರಿಂದ ವಿರೋಧ ಮತ್ತಷ್ಟು ಹೆಚ್ಚಾಗಿತ್ತು. ಮುಸ್ಲಿಮರ ತುಷ್ಟೀಕರಣಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ಹಿಂದು ಸಂಘಟನೆಗಳು ಹಾಗೂ ಬಿಜೆಪಿಗರು ಹೋರಾಟ ಮಾಡಿದರು. ಇದರಿಂದ ಸರ್ಕಾರ ಮುಜುಗುರ ಎದುರಿಸುವಂತಾಯಿತು.
ಮುಸ್ಲಿಂ ನಾಯಕರ ಸಮಾವೇಶದಲ್ಲಿ ಎಡವಟ್ಟು:
2023 ಡಿಸೆಂಬರ್ 4ರಂದು ಹುಬ್ಬಳ್ಳಿಯಲ್ಲಿ ನಡೆದಿದ್ದ ಮುಸ್ಲಿಂ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಸಿಸ್ ಉಗ್ರರ ಜೊತೆ ಸಂಪರ್ಕ ಹೊಂದಿರುವವನ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ವಿಜಯಪುರ ಮೂಲದ ತನ್ವೀರ್ ಹಶ್ಮಿ ಜತೆ ವೇದಿಕೆ ಹಂಚಿಕೊಂಡಿದ್ದು ಸರ್ಕಾರಕ್ಕೆ ಮುಜುಗರ ತಂದಿತ್ತು. ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದರು.
ಮುಸ್ಲಿಮರಿಗೆ ದೇಶದ ಸಂಪತ್ತು ಹಂಚುತ್ತೇವೆ ಎಂದು ವಿವಾದ ಮೈಮೇಲೆ ಎಳೆದುಕೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರು ಈ ಸಮಾವೇಶದಲ್ಲಿ ಹೇಳಿದ್ದು ಸಾಕಷ್ಟು ವಿವಾದ ಹುಟ್ಟು ಹಾಕಿತ್ತು. ಇದು ರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿತ್ತು. ಇದೇ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗುವ ಅನುದಾನದ ಮೊತ್ತವನ್ನು 4 ರಿಂದ 10 ಸಾವಿರ ಕೋಟಿ ರೂ.ಗೆ ಹೆಚ್ಚಳ ಮಾಡಲಾಗುವುದು ಎಂದು ಸಿಎಂ ಸಿದ್ದರಾಯಯ್ಯ ಭರವಸೆ ನೀಡಿದ್ದರು. ಈ ಹೇಳಿಕೆಗೆ ವಿರೋಧ ಪಕ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಕರ ಸೇವಕರ ಕೇಸ್ ರೀ ಓಪನ್:
ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ದಿನ ಹತ್ತಿರ ಬರುತ್ತಿರುವ ಸಮಯದಲ್ಲಿಯೇ ರಾಮಜನ್ಮಭೂಮಿ ಹೋರಾಟ ಪ್ರಕರಣ ರೀಓಪನ್ ವಿಚಾರ ಸಾಕಷ್ಟು ಸದ್ದು ಮಾಡಿದೆ. 31 ವರ್ಷಗಳ ಬಳಿಕ ಈ ಪ್ರಕರಣ ರೀ ಓಪನ್ ಮಾಡುವಂತಹ ಅವಶ್ಯಕತೆ ಏನಿತ್ತು ಎಂದು ಬಿಜೆಪಿ ಹಾಗೂ ಹಿಂದು ಸಂಘಟನೆಗಳು ಹೋರಾಟ ಆರಂಭಿಸಿವೆ. ಇದು ಮುಸಲ್ಮಾನರ ತುಷ್ಟೀಕರಣದ ಪರಾಕಾಷ್ಠೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹರಿಹಾಯ್ದಿದ್ದಾರೆ. ಎರಡು ಕಡೆ ಅಲ್ಪ ಸಂಖ್ಯಾತರ ಓಲೈಕೆ, ಮತ್ತೊಂದು ಕಡೆ ಹಿಂದು ಗಳನ್ನ ಟಾರ್ಗೆಟ್ ಮಾಡ್ತಾ ರಾಜ್ಯ ಸರ್ಕಾರ ಎಂಬ ಪ್ರಶ್ನೆ ಉದ್ಭವಿಸಿದೆ. ಕಾಂಗ್ರೆಸ್‌ಗೆ ಈ ಮೂರು ಧರ್ಮ ದಂಗಲ್‌ಗಳು ಮುಜುಗರ ಉಂಟು ಮಾಡಿವೆ.