

ಹುಬ್ಬಳ್ಳಿ: ಹದಿನಾಲ್ಕು ವರ್ಷದ ವಯೋಮಿತಿಯ ಕರ್ನಾಟಕ ರಾಜ್ಯ ಕ್ರಿಕೆಟ್‌ಗೆ (ಕೆಎಸ್ಸಿಎ) ಟೀಮ್ ಇಂಡಿಯಾದ ರೋಹಿತ್ ಶರ್ಮಾ ಪ್ರಾಯೋಜಕತ್ವದ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿಯ ಜಾಯ್ ಜೇಮ್ಸ್ ಸುಳ್ಳದ ಆಯ್ಕೆಯಾಗಿದ್ದಾರೆ.
ಬುಧವಾರ ಸಂಜೆ ಕೆಎಸ್ಸಿಎ ನೂತನ ತಂಡವನ್ನು ಪ್ರಕಟಿಸಿದ್ದು, ಅದರಲ್ಲಿ ಹುಬ್ಬಳ್ಳಿ ಹುಡುಗ ಆಯ್ಕೆಯಾಗಿರುವುದು ಕ್ರೀಡಾಭಿಮಾನಿಗಳಲ್ಲಿ ಹರ್ಷ ತಂದಿದೆ.
ನೀರೆರೆದ ಅಕಾಡೆಮಿ:ಮಧ್ಯಮ ವರ್ಗದಲ್ಲಿ ಜನಿಸಿದ ಜಾಯ್ಗೆ ಕ್ರಿಕೆಟ್ನಲ್ಲಿ ಆಸಕ್ತಿ ಇದ್ದರೂ ಮನೆಯ ಆಥಿರ್ಕ ಸ್ಥಿತಿ ಮುಂದೆ ಹೋಗಲು ಬಿಡುವಂತಿರಲಿಲ್ಲ. ಪಾಲಕರು ಮಗನ ಆಸೆ ಹೇಗೆ ಪೂರೈಸಬೇಕೆಂಬ ಚಿಂತೆಯಲ್ಲಿದ್ದರು. ಇಂತಹ ಸಂದರ್ಭದಲ್ಲಿ ನೆರವಿಗೆ ಬಂದಿದ್ದು ಶ್ರೀದುರ್ಗಾ ಸ್ಪೋರ್ಟ್ಸ್ ಅಕಾಡೆಮಿ. ಅಕಾಡೆಮಿ ಸಂಸ್ಥಾಪಕರು, ಯುವ ಉದ್ಯಮಿ ವಿರೇಶ ಉಂಡಿ ಅವರ ಸಹಾಯದಿಂದ ರಾಜ್ಯ ಮಟ್ಟದ ಕ್ರಿಕೆಟ್ನಲ್ಲಿ ನಮ್ಮ ಮಗ ಪದಾರ್ಪಣೆಗೈಯಲು ಸಾಧ್ಯವಾಯಿತು ಎಂದು ಬಾಲಕನ ತಂದೆ ಜೇಮ್ಸ್ ಧನ್ಯತೆ ಪ್ರಕಟಿಸಿದ್ದಾರೆ.
ಕ್ರಿಕೆಟ್ನಲ್ಲೇ ಬದುಕು ಕಟ್ಟಿಕೊಳ್ಳಬೇಕೆಂದು ನಾಲ್ಕು ವರ್ಷಗಳ ಹಿಂದೆ ಅಕಾಡೆಮಿಗೆ ಸೇರಿದ ಜಾಯ್, ಕಠಿಣ ಪರಿಶ್ರಮ ಹಾಗೂ ನುರಿತ ಕೋಚ್ಗಳ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾನೆ.
ಹುಬ್ಬಳ್ಳಿಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಜಾಯ್ ಎಡಗೈ ಬ್ಯಾಟಮನ್/ವಿಕೇಟ್ ಕೀಪರ್ ಆಗಿ ಎಳೆಯ ವಯಸ್ಸಿನಲ್ಲೆ ಛಾಪು ಮೂಡಿಸಿದ್ದಾನೆ.
ರನ್ ಮಶೀನ್:ಕೆಎಸ್ಸಿಎ ನಡೆಸಿದ 14 ವರ್ಷ ವಯೋಮಿತಿಯ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಾಯ್ 535 ರನ್ ಗಳಿಸುವ ಮೂಲಕ ರನ್ ಮಶೀನ್ ಎಂದೂ ಖ್ಯಾತಿ ಗಳಿಸಿದ್ದಾನೆ. ಬೆಂಗಳೂರಿನಲ್ಲಿ ನಡೆದ ಇಂಟರ್ಜೋನ್ ಪಂದ್ಯಾವಳಿಯ ಒಟ್ಟು 4 ಪಂದ್ಯಾವಳಿಗಳಲ್ಲಿ 3 ಶತಕದೊಂದಿಗೆ 457 ರನ್ ಕಲೆ ಹಾಕಿದ್ದು ವಿಶೇಷ. ಫೆಬ್ರವರಿ 4ರಿಂದ ಗೋವಾದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ರಾಜ್ಯ ತಂಡ ಪ್ರತಿನಿಧಿಸಲಿದ್ದಾನೆ.