

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ ರಾಜ್ಯ ಸರ್ಕಾರ 2006-07ನೇ ಸಾಲಿನಲ್ಲಿ ಜಾರಿಗೆ ತಂದ ‘ಭಾಗ್ಯಲಕ್ಷ್ಮೀ’ ಯೋಜನೆಗೀಗ 18 ತುಂಬಿದೆ. ಹೀಗಾಗಿ, ಆ ಸಾಲಿನಲ್ಲಿ ನೋಂದಣಿಯಾದ ಫಲಾನುವಿಗಳಿಗೆ ಈಗ ಪರಿಪಕ್ವತೆ (ಮಾಚ್ಯುರಿಟಿ) ಮೊತ್ತ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ 2006-07ರಲ್ಲಿ ಒಟ್ಟು 8,785 ಫಲಾನುಭವಿಗಳು ನೋಂದಣಿ ಆಗಿದ್ದರು. ಆ ಪೈಕಿ 5,303 ಫಲಾನುಭವಿಗಳು ಪರಿಪಕ್ವತೆ ಮೊತ್ತಕ್ಕಾಗಿ ಆನ್ಲೈನ್ನಲ್ಲಿ ಮಾಹಿತಿ ತುಂಬಿದ್ದಾರೆ. 1,584 ಫಲಾನುಭವಿಗಳಿಗೆ ಈಗಾಗಲೇ ಭಾರತೀಯ ಜೀವ ವಿಮಾ ನಿಗಮದಿಂದ ನೇರವಾಗಿ ಅವರ ಖಾತೆಗೆ ಪರಿಪಕ್ವತೆ ಮೊತ್ತ ಜಮೆಯಾಗಿದೆ. ಇನ್ನುಳಿದ ಫಲಾನುಭವಿಗಳಿಗೆ ಹಂತಹಂತವಾಗಿ ಹಣ ಜಮೆ ಆಗಲಿದೆ. ಭಾಗ್ಯಲಕ್ಷ್ಮೀ ಯೋಜನೆಯ ಮೊದಲ ಫಲಾನುಭವಿಗಳಿಗೆ ತಲಾ ಪರಿಪಕ್ವತೆ ಮೊತ್ತ 32,351 ರೂ. ಜಮೆ ಆಗಿದೆ. ಯೋಜನೆ ಉದ್ದೇಶ: 2001ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ಲಿಂಗಾನುಪಾತ 1000/964 (1000 ಗಂಡು ಮಕ್ಕಳು, 964 ಹೆಣ್ಣು ಮಕ್ಕಳು) ಇದೆ. 2011ರ ಜನಗಣತಿ ಪ್ರಕಾರ 1000/973 ಆಗಿದೆ. ಹೆಣ್ಣು ಮಗುವಿನ ಬಗ್ಗೆ ಸಮಾಜದಲ್ಲಿರುವ ಧೋರಣೆ ಬದಲಿಸಲು 2006-07ನೇ ಸಾಲಿನಲ್ಲಿ ಅಂದಿನ ಸಮ್ಮಿಶ್ರ ಸರ್ಕಾರದಲ್ಲಿ ಆರ್ಥಿಕ ಸಚಿವರೂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಬಜೆಟ್ನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ‘ಭಾಗ್ಯಲಕ್ಷ್ಮೀ’ ಹೊಸ ಕಲ್ಯಾಣ ಯೋಜನೆ ಘೊಷಿಸಿದ್ದರು. ಇದರಡಿ ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣ, ಪೋಷಣೆ ಬಗ್ಗೆ ಕಾಳಜಿ ವಹಿಸುವುದು ಉದ್ದೇಶವಾಗಿದೆ. 2006ರಿಂದ 2024-25ರವರೆಗೆ ಭಾಗ್ಯಲಕ್ಷ್ಮೀ- ಸುಕನ್ಯಾ ಸಮೃದ್ಧಿ ಯೋಜನೆಯಡಿ ಈವರೆಗೆ 1,26,515 ಫಲಾನುಭವಿಗಳು ನೋಂದಣಿ ಆಗಿದ್ದಾರೆ. ಉತ್ತಮ ಯೋಜನೆ ಯೋಜನೆ ಉತ್ತಮವಾಗಿರುವುದರಿಂದ 2006ರ ನಂತರ ಬಂದ ಎಲ್ಲ ಸರ್ಕಾರಗಳು ಯೋಜನೆಯನ್ನು ಅಗತ್ಯ ಮಾರ್ಪಾಡುಗಳೊಂದಿಗೆ ಮಂದುವರಿಸಿಕೊಂಡು ಬಂದಿವೆ. ಜತೆಗೆ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಿವೆ. ಆರಂಭದಲ್ಲಿ ನೋಂದಣಿ ಆದವರಿಗೆ 32,351 ರೂ. ದೊರೆತರೆ, 2020-21ನೇ ಸಾಲಿನಿಂದ ನೋಂದಣಿ ಆದವರಿಗೆ ಅಂದಾಜು 1.27 ಲಕ್ಷ ರೂ. ದೊರೆಯಲಿದೆ. ಭಾಗ್ಯಲಕ್ಷ್ಮೀ- ಸುಕನ್ಯಾ ಸಮೃದ್ಧಿ 2020-21ನೇ ಸಾಲಿನಿಂದ ಭಾಗ್ಯಲಕ್ಷ್ಮೀ ಯೋಜನೆಯನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪಾಲಕರಿಗೆ ಹೆಣ್ಣು ಮಗು ಜನಿಸಿದರೆ ಆ ಮಗು ಎರಡು ವರ್ಷ ತುಂಬುವುದರೊಳಗೆ ಭಾಗ್ಯಲಕ್ಷ್ಮೀಯಡಿ ಹೆಸರು ನೋಂದಾಯಿಸಲು ಅವಕಾಶವಿದೆ. ನೋಂದಣಿ ಬಳಿಕ ಸರ್ಕಾರ ಆ ಮಗುವಿನ ಖಾತೆಗೆ ಪ್ರತಿ ವರ್ಷ 3 ಸಾವಿರ ರೂ.ನಂತೆ 15 ವರ್ಷಗಳವರೆಗೆ ಒಟ್ಟು 45 ಸಾವಿರ ರೂ.ಗಳನ್ನು ಸುಕನ್ಯಾ ಸಮೃದ್ಧಿ ಯೋಜನೆಯಡಿ ಠೇವಣಿ ಇಡುತ್ತದೆ. ಫಲಾನುಭವಿಗೆ 21 ವರ್ಷ ಪೂರ್ಣಗೊಂಡ ನಂತರ ಅಂದಾಜು 1.27 ಲಕ್ಷ ರೂ. ನೀಡಲಾಗುತ್ತದೆ. ಬಿಪಿಎಲ್ ಚೀಟಿ ಹೊಂದಿರುವ ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಯೋಜನೆಯ ಲಾಭ ಪಡೆಯಬಹುದು.
2006ರಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ ನನ್ನ ಪಾಲಕರು ಹೆಸರು ನೋಂದಣಿ ಮಾಡಿದ್ದರು. 2024ರಲ್ಲಿ ಪಿಯುಸಿ ಮುಗಿದಿದೆ. ಈಗ ಬಿಸಿಎ ಓದುತ್ತಿದ್ದೇನೆ. ಈ ಭಾಗ್ಯಲಕ್ಷ್ಮೀ ಹಣದಿಂದ ಲ್ಯಾಪ್ಟಾಪ್ ತೆಗೆದುಕೊಳ್ಳುವ ಉದ್ದೇಶವಿದೆ. | ಅಶ್ವಿನಿ ರಾಜುಗೌಡ ಹಿತ್ತಲಮನಿ ಫಲಾನುಭವಿ, ಕಿರೇಸೂರ ಭಾಗ್ಯಲಕ್ಷ್ಮೀ ಯೋಜನೆಯಡಿ 2006-07ರಲ್ಲಿ ನನ್ನ ತಾಯಿ ಹೆಸರು ನೋಂದಾಯಿಸಿದ್ದರು. ಈಗ 18 ವರ್ಷ ಪೂರ್ಣಗೊಂಡಿದೆ. ಯೋಜನೆಯಡಿ ಪರಿಪಕ್ವತೆ ಮೊತ್ತ 32, 351 ರೂ. ನೇರವಾಗಿ ಕಳೆದ 15 ದಿನಗಳ ಹಿಂದೆ ನಮ್ಮ ಖಾತೆಗೆ ಜಮೆ ಆಗಿದೆ. ಈ ಹಣವನ್ನು ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಬಳಸುತ್ತೇನೆ. | ಪವಿತ್ರಾ ಬಸಪ್ಪ ಹಳಗತ್ತಿ, ಫಲಾನುಭವಿ, ಬ್ಯಾಹಟ್ಟಿ