ಭಕ್ತಿಯಿಂದ ಸೇವೆಗೈದರೆ ದೇವರ ಅನುಗ್ರಹ ಪ್ರಾಪ್ತಿ

23BANASHANKRI SABHE
Published on

ಹುಬ್ಬಳ್ಳಿ: ಭಗವಂತನಲ್ಲಿ ಅಚಲವಾದ ನಂಬಿಕೆ ಇಟ್ಟು ಭಕ್ತಿಯಿಂದ ಸೇವೆ ಸಲ್ಲಿಸಿದರೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ನಗರದ ಎರಡೆತ್ತಿನಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ವಿದ್ಯಾನಗರದ ಬನಶಂಕರಿ ಬಡಾವಣೆಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ದೇವಿ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಏಕಾಗ್ರತೆಯಿಂದ ದೇವರ ನಾಮಸ್ಮರಣೆ, ದೇವಸ್ಥಾನ, ಧಾರ್ಮಿಕ ಸಮಾರಂಭಗಳಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿಸುವುದು, ದಾನ, ಧರ್ಮ ಮಾಡುವುದು, ಅನ್ನದಾಸೋಹಕ್ಕೆ ನೆರವು ನೀಡುವುದು, ಬಡವರಿಗೆ ಸಹಾಯ ಮಾಡುವುದರಿಂದ ದೇವರ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದರು.
ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಅಜ್ಞಾನದ ಭ್ರಾಂತಿಯಿಂದಾಗಿ ಮನುಷ್ಯನಿಗೆ ಜೀವನದಲ್ಲಿ ಸುಖ ಇದ್ದರೂ ಕಾಣಿಸದಂತಾಗಿದೆ. ಆ ಅಜ್ಞಾನ ಹೋಗಲಾಡಿಸಲು ಧಾರ್ಮಿಕ ಕಾರ್ಯಕ್ರಮ ಮತ್ತು ಸತ್ಸಂಗಗಳಲ್ಲಿ ಪಾಲ್ಗೊಂಡು ಶರಣರ ಮಾತುಗಳನ್ನು ಆಲಿಸಬೇಕು ಎಂದರು.
ಶುಕ್ರವಾರ ಬೆಳಗ್ಗೆ ದೇವಿ ಮೂರ್ತಿಗೆ ರುದ್ರಾಭಿಷೇಕ, ಚಂಡಿ ಪಾರಾಯಣ, ಗಣಪತಿ, ರುದ್ರ, ಸೂರ್ಯ ಹಾಗೂ ವಿಷ್ಣು ಹೋಮ, ರಥ ಪೂಜೆ, ದೇವಿಗೆ ಸಾಮೂಹಿಕ ಸಹಸ್ರ ಕುಂಕುಮಾರ್ಚನೆ ಸೇವೆ ನಡೆಯಿತು. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಅಜೀತ ರೋಖಡೆ, ಬಸವರಾಜ ಬಣಕಾರ, ಸೇವಾ ಸಮಿತಿ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು. ಸಂಜೆ ಶಾಕಂಬರಿ ಮಹಿಳಾ ಮಂಡಳ, ಇತರ ಮಹಿಳಾ ಮಂಡಳಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net