

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಜುಲೈನಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಕುಟುಂಬದ ಪ್ರತಿ ಸದಸ್ಯನಿಗೆ ತಲಾ 5 ಕೆಜಿ ಅಕ್ಕಿ ವಿತರಿಸಲಾಗಿದೆ. ಅಂತ್ಯೋದಯ ಅನ್ನ ಯೋಜನೆ ಚೀಟಿದಾರ (ಎಎವೈ) ಕುಟುಂಬಕ್ಕೆ 35 ಕೆಜಿ ಅಕ್ಕಿ ವಿತರಿಸಲಾಗಿದೆ. ಆದರೆ, ಅಕ್ಕಿ ಕೊರತೆಯಿಂದಾಗಿ ಇನ್ನುಳಿದ 5 ಕೆಜಿ ಅಕ್ಕಿ ಬದಲು ಎರಡೂ ಚೀಟಿದಾರರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಆಹಾರ ಇಲಾಖೆ ಹಣ ವರ್ಗಾವಣೆ ಮಾಡಿದೆ.
ಜಿಲ್ಲೆಯ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ, ಅಳ್ನಾವರ ಮತ್ತು ಅಣ್ಣಿಗೇರಿ ತಾಲೂಕಿನಲ್ಲಿರುವ ಎಎವೈ ಮತ್ತು ಬಿಪಿಎಲ್ ಚೀಟಿದಾರರ ಖಾತೆಗಳಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಜುಲೈನಲ್ಲಿ ಒಟ್ಟು 16.68 ಕೋಟಿ ರೂಪಾಯಿ ಜಮೆ ಮಾಡಿದೆ.
ಜಿಲ್ಲೆಯಲ್ಲಿ 29,871 ಅಂತ್ಯೋದಯ ಚೀಟಿ, 3,58,474 ಬಿಪಿಎಲ್ ಮತ್ತು 29,505 ಎಪಿಎಲ್ ಪಡಿತರ ಚೀಟಿಗಳಿವೆ. ಇವುಗಳ ಪೈಕಿ 15,815 ಎಎವೈ ಚೀಟಿ, 2,66,805 ಬಿಪಿಎಲ್ ಚೀಟಿದಾರರಿಗೆ ಹಣ ವರ್ಗಾವಣೆ ಆಗಿದೆ. ಬ್ಯಾಂಕ್ ಖಾತೆ ಇಲ್ಲದಿರುವ, ಎಸ್‌ಬಿ ಖಾತೆಗೆ ಕೆವೈಸಿ ಆಗದಿರುವ ಮತ್ತು ಖಾತೆಗಳಿಗೆ ಎನ್‌ಪಿಸಿಐ (ನಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ) ಲಿಂಕ್ ಆಗದಿರುವ ಕಾರಣದಿಂದ 1.5 ಲಕ್ಷ ಚೀಟಿದಾರರಿಗೆ ಹಣ ವರ್ಗಾವಣೆ ಆಗಿಲ್ಲ.
ಯಾವ ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗಳು ಸರಿಯಾಗಿಲ್ಲ ಎಂಬುದರ ಪಟ್ಟಿಯನ್ನು ಜಿಲ್ಲೆಯ ಆಹಾರ ಇಲಾಖೆ ಅಧಿಕಾರಿಗಳು ಆಯಾ ನ್ಯಾಯಬೆಲೆ ಅಂಗಡಿಗಳಿಗೆ ಕಳುಹಿಸಿದೆ. ಬ್ಯಾಂಕ್ ಖಾತೆ ಸರಿಪಡಿಸಿಕೊಳ್ಳುವಂತೆ ನ್ಯಾಯಬೆಲೆ ಅಂಗಡಿಯವರು ಆಯಾ ಪಡಿತರ ಚೀಟಿದಾರರಿಗೆ ಮಾಹಿತಿ ನೀಡುತ್ತಿದ್ದಾರೆ. ಬ್ಯಾಂಕ್ ಖಾತೆ ಹೊಂದಿಲ್ಲದ ಚೀಟಿದಾರರಿಗೆ ಆಹಾರ ಇಲಾಖೆ ಅಧಿಕಾರಿಗಳೇ ಗ್ರಾಮೀಣ ಭಾಗದ ಅಂಚೆ ಕಚೇರಿಗಳಲ್ಲಿ ಹೊಸದಾಗಿ 4,582 ಖಾತೆಗಳನ್ನು ಮಾಡಿಸಿ ಕೊಟ್ಟಿದ್ದಾರೆ. ಧಾರವಾಡ- 989, ಹುಬ್ಬಳ್ಳಿ-805, ಕಲಘಟಗಿ-1105, ಕುಂದಗೋಳ-898, ನವಲಗುಂದದಲ್ಲಿ 785 ಖಾತೆ ತೆರೆಯಲಾಗಿದೆ.
ಗ್ರಾಹಕರು ಲಿಂಕ್ ಮಾಡಿಸಬೇಕು
ಬಹುತೇಕ ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗಳಿಗೆ ಕೆವೈಸಿ ಮತ್ತು ಎನ್‌ಪಿಸಿಐ ಲಿಂಕ್ ಇಲ್ಲದ್ದರಿಂದ ಹಣ ವರ್ಗಾವಣೆ ಆಗಿಲ್ಲ. ಹೀಗಾಗಿ, ಪಡಿತರ ಚೀಟಿದಾರರು ಬ್ಯಾಂಕ್ ಖಾತೆಗಳಿಗೆ ಎರಡೂ ಲಿಂಕ್ ಮಾಡಿಸಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅಂದಾಜು 50 ಸಾವಿರ ಚೀಟಿದಾರರ ಬಳಿ ಬ್ಯಾಂಕ್ ಖಾತೆಗಳಿರಲಿಲ್ಲ. ಅಂಥವರಿಗೆ ಅಂಚೆ ಕಚೇರಿಗಳಲ್ಲಿ ಆಹಾರ ಇಲಾಖೆಯಿಂದ ಹೊಸ ಖಾತೆ ಮಾಡಿಸಿಕೊಡಲಾಗಿದೆ. ಇನ್ನುಳಿದವರು ಬ್ಯಾಂಕ್ ಖಾತೆಗಳಿಗೆ ಕೆವೈಸಿ ಮತ್ತು ಎನ್‌ಪಿಸಿಐ ಲಿಂಕ್ ಮಾಡಿಸಬೇಕು. ಪಡಿತರ ಚೀಟಿಯಲ್ಲಿರುವ ಸದಸ್ಯರು ಮೃತಪಟ್ಟಿದ್ದರೆ ಅವರ ಹೆಸರನ್ನು ಚೀಟಿಯಲ್ಲಿ ಕಡಿಮೆ ಮಾಡಿಸಬೇಕು.ವಿನೋದಕುಮಾರ ಹೆಗ್ಗಳಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಜಂಟಿ ನಿರ್ದೇಶಕ ಧಾರವಾಡ