ಮುನ್ನೆಚ್ಚರಿಕೆ ಕೈಗೊಳ್ಳಲು ಹುಬ್ಬಳ್ಳಿ ಏರ್​ಪೋರ್ಟ್​ಗೆ ಸೂಚನೆ

New Airport new
Published on

ಹುಬ್ಬಳ್ಳಿ : ಅಹಮಾದಾಬಾದ್​ನಲ್ಲಿ ವಿಮಾನ ನಿಲ್ದಾಣ ಪಕ್ಕದ ಕಟ್ಟಡಕ್ಕೆ ಏರ್ ಇಂಡಿಯಾ ವಿಮಾನ ಡಿಕ್ಕಿ ಹೊಡೆದ ಭೀಕರ ದುರಂತದ ಬೆನ್ನಲ್ಲೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಏರ್ ಕ್ರ್ಯಾಶ್ ಸಂಭವಿಸಿದಾಗ ಕೈಗೊಳ್ಳುವ ಮುನ್ನೆಚ್ಚರಿಕೆ ಬಗ್ಗೆ ಅಗತ್ಯ ಸಿದ್ಧತೆ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇದರೊಂದಿಗೆ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಕಲ್ಪಿತ ಕಾರ್ಯಾಚರಣೆ (ಮಾಕ್ ಡ್ರಿಲ್) ನಡೆಸುವಂತೆಯೂ ಸೂಚನೆ ನೀಡಲಾಗಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೂ ಐದು ದಿನಗಳ ಹಿಂದೆಯಷ್ಟೇ ಈ ಕುರಿತು ಸೂಚನೆ ಬಂದಿದೆ. ಹೀಗಾಗಿ, ವಿಮಾನ ನಿಲ್ದಾಣದ ಒಳಗಡೆ ಸಂಭವಿಸಬಹುದಾದ ಅಪಘಾತದ ಸಂದರ್ಭದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳುವ ಬಗ್ಗೆ ಕಲ್ಪಿತ ಕಾರ್ಯಾಚರಣೆ ನಡೆಸಲು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಯಾರಿಗಳು ನಡೆಯುತ್ತಿವೆ.

ವಿಮಾನ ರನ್ ವೇನಲ್ಲಿ ಇಳಿಯುವಾಗ ಹಾಗೂ ರನ್ ವೇದಿಂದ ಮೇಲೆ ಹಾರುವಾಗ ಸಂಭವಿಸಬಹುದಾದ ಅಪಘಾತದಲ್ಲಿ ಪ್ರಯಾಣಿಕರ ರಕ್ಷಣೆ, ವಿಮಾನಕ್ಕೆ ಹತ್ತಿದ ಬೆಂಕಿ ನಂದಿಸುವುದು, ಪ್ರಯಾಣಿಕರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಜೂ. 30ರಂದು ಕಲ್ಪಿತ ಕಾರ್ಯಾಚರಣೆ ನಡೆಸಲು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಇದಕ್ಕಾಗಿ ಒಂದು ಮಾದರಿ ವಿಮಾನವನ್ನೂ ಸಿದ್ಧಪಡಿಸಲಾಗುತ್ತಿದೆ.

ಈಗಾಗಲೇ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಏರ್​ಪೋರ್ಟ್ ರೆಸ್ಕೂ ್ಯ ಆಂಡ್ ಫೈರ್ ಫೈಟಿಂಗ್ ಸರ್ವಿಸ್​ನ (ಎಆರ್​ಎಫ್​ಎಸ್) ಮೂರು ಫೈರ್ ಇಂಜಿನ್​ಗಳಿವೆ. ಪ್ರತಿ ವಿಮಾನ ರನ್​ವೇ ಮೇಲೆ ಇಳಿಯುವಾಗ ಹಾಗೂ ರನ್ ವೇದಿಂದ ಹಾರಾಟ ನಡೆಸುವಾಗ ಎಆರ್​ಎಫ್​ಎಸ್ ತುರ್ತು ಕಾರ್ಯಾಚರಣೆಗೆ ಸಿದ್ದವಿರುತ್ತದೆ.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನಿತ್ಯ ದೆಹಲಿ ಹಾಗೂ ಮುಂಬೈನಿಂದ ಇಂಡಿಗೋ ಏರ್​ಲೈನ್ಸ್​ನ ಏರ್​ಬಸ್ 320 ಬಂದಿಳಿಯುತ್ತದೆ. ಇದರೊಂದಿಗೆ ಮೂರರಿಂದ ನಾಲ್ಕು ಎಟಿಆರ್ 72 ಸಣ್ಣ ವಿಮಾನಗಳೂ ಆಗಮಿಸುತ್ತವೆ. ನಿತ್ಯ ಅಂದಾಜು ಒಂದು ಸಾವಿರ ಪ್ರಯಾಣಿಕರು ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಬಳಸುತ್ತಾರೆ. ಇವರೆಲ್ಲರ ರಕ್ಷಣೆಯ ಹೊಣೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಮೇಲಿದೆ. ಕಲ್ಪಿತ ಕಾರ್ಯಾಚರಣೆ ನಡೆಸಲು ಸಿದ್ದತೆಗಳು ತುರುಸಿನಿಂದ ನಡೆದಿವೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net