

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ ರಾಜ್ಯದ ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಕಳೆದ 10 ವರ್ಷಗಳಿಂದ ಖಾಲಿ ಆಗಿರುವ ವಿವಿಧ ವಿಷಯಗಳ ಉಪನ್ಯಾಸಕರ ನೇಮಕಾತಿಯೇ ಆಗಿಲ್ಲ. ಇದರಿಂದ ರಾಜ್ಯದ ಬಹುತೇಕ ಗ್ರಾಮೀಣ ಪ್ರದೇಶಗಳ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಏಕೋಪಾಧ್ಯಾಯ (ಒಬ್ಬರೇ ಉಪನ್ಯಾಸಕರು) ಇದ್ದಾರೆ. ಉಪನ್ಯಾಸಕರ ನೇಮಕಾತಿ ಆಗದ್ದಕ್ಕೆ ರಾಜ್ಯದ ಕೆಲ ಪದವಿಪೂರ್ವ ಕಾಲೇಜುಗಳು ಬಾಗಿಲು ಮುಚ್ಚುವ ಹಂತ ತಲುಪಿವೆ. ಇನ್ನುಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸ್ಥಿತಿ ಕೂಡ ಇದೇ ಆಗಿದೆ. ಆರೇಳು ದಶಕಗಳಿಂದ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರ ಬಾಳಿಗೆ ಬೆಳಕಾದ ಶಿಕ್ಷಣ ಸಂಸ್ಥೆಗಳೇ ಇಂದು ಕತ್ತಲ ಕೂಪದಲ್ಲಿ ಬೀಳುವಂತಾಗಿರುವುದು ವಿಪರ್ಯಾಸ. ಗ್ರಾಮೀಣ ಭಾಗದ ಅನುದಾನಿತ ಶಿಕ್ಷಣ ಸಂಸ್ಥೆಗಳ ಕೂಗು ಅರಣ್ಯ ರೋದನವಾಗಿದೆ. ಯಾವ ಸರ್ಕಾರಗಳೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿಲ್ಲ ಎಂಬುದು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ದೂರು. ರಾಜ್ಯದ ಕೆಲ ಮಠಗಳು, ಸಂಸ್ಥೆಗಳು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ತ್ರಿವಿಧ ದಾಸೋಹಗಳ (ಅನ್ನ, ವಸತಿ, ಶಿಕ್ಷಣ) ಮೂಲಕ ಶಿಕ್ಷಣ ನೀಡುತ್ತ ಬಂದಿವೆ. ಅಂಥ ಸಂಸ್ಥೆಗಳ ಶಾಲೆ-ಕಾಲೇಜುಗಳಿಗೆ ಸರ್ಕಾರ ಕಾಲಕಾಲಕ್ಕೆ ಶಿಕ್ಷಕರು, ಉಪನ್ಯಾಸಕರ ನೇಮಕಕ್ಕೆ ಅನುಮತಿ ನೀಡಿ ಸಹಕರಿಸಬೇಕು. ಏಕೆಂದೆರೆ ಹಿಂದೆ ಸರ್ಕಾರಗಳು ಮಾಡಲಾಗದ್ದನ್ನು ಇಂಥ ಮಠ, ಮಾನ್ಯಗಳು, ಶಿಕ್ಷಣ ಸಂಸ್ಥೆಗಳು ಮಾಡಿವೆ. 2015ರ ಜನವರಿಯಿಂದ 2025ರವರೆಗೆ ರಾಜ್ಯದ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ನಿಧನ, ನಿವೃತ್ತಿ, ರಾಜೀನಾಮೆ ಇತರ ಕಾರಣಗಳಿಂದ ಖಾಲಿ ಆಗಿರುವ ಶಿಕ್ಷಕರು, ಉಪನ್ಯಾಸಕರ ಹುದ್ದೆ ಭರ್ತಿಗೆ ಸರ್ಕಾರ ಅನುಮತಿ ನೀಡಿಲ್ಲ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗದಂತಾಗಿದೆ. ಸಿಎಂ ಅನುಮತಿ ನೀಡಿದ್ರು ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ 2017ರ ಫೆಬ್ರವರಿಯಲ್ಲಿ 2013ರಿಂದ 2015ರ ಡಿಸೆಂಬರ್ವರೆಗೆ ರಾಜ್ಯದ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಆಗಿರುವ ಬೋಧಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದ್ದರು. ಅಲ್ಲಿಂದ ಈವರೆಗೆ ಮತ್ತೆ ಯಾರೂ ಖಾಲಿ ಇರುವ ಬೋಧಕರ ಹುದ್ದೆ ಭರ್ತಿಗೆ ಮುಂದಾಗಲಿಲ್ಲ. ಈಗ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಸಿದ್ದರಾಮಯ್ಯನವರೇ 2015ರಿಂದ 2020ರವರೆಗೆ ರಾಜ್ಯದ ಅನುದಾನಿತ ಶಾಲೆ, ಕಾಲೇಜುಗಳಲ್ಲಿ ಖಾಲಿ ಆಗಿರುವ ಶಿಕ್ಷಕರು, ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಅನುಮತಿ ನೀಡಿದ್ದಾರೆ. ಆದರೆ, ಆ ಆದೇಶ ಎಸ್ಸಿ ಒಳಮೀಸಲಾತಿ ಕುರಿತು ಸಮೀಕ್ಷೆ ಕಾರಣದಿಂದ ಜಾರಿಯಾಗಿಲ್ಲ. ಎಸ್ಸಿ ಒಳಮೀಸಲಾತಿ ಬೇಗ ಮುಗಿಯಲಿ, ಬೇಗ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಲಿ ಎಂಬುದು ಸಾವಿರಾರು ಶಿಕ್ಷಕ ಉದ್ಯೋಗಾಕಾಂಕ್ಷಿಗಳು ಮತ್ತು ವಿದ್ಯಾರ್ಥಿಗಳ ಒಕ್ಕೊರಲ ಒತ್ತಾಯವಾಗಿದೆ.
23 ಉಪನ್ಯಾಸಕ ಹುದ್ದೆಗಳಿಗೆ ಅನುಮತಿ ನೀಡಿ 2013ರಿಂದ 2015ರವರೆಗೆ ಖಾಲಿ ಆಗಿರುವ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿಗೆ 2017ರಲ್ಲಿ ಸರ್ಕಾರ ಅನುಮತಿ ನೀಡಿದೆ. ಆದರೆ, ಗ್ರಾಮೀಣ ಭಾಗದ ಕೆಲ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆಗಳಿಗೆ ವಾರಕ್ಕೆ 20 ಗಂಟೆಗಳ ಕಾರ್ಯಭಾರ ಕೊರತೆ ಮತ್ತಿತರ ಕಾರಣಗಳಿಂದ 23 ಉಪನ್ಯಾಸಕ ಹುದ್ದೆಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ನೇಮಕಾತಿಗೆ ಅನುಮತಿ ನೀಡಿರಲಿಲ್ಲ. ಆದರೆ, ಅಂಥ ಸಂಸ್ಥೆಗಳು ಕಾರ್ಯಭಾರ ಹೊಂದಾಣಿಕೆ ಮಾಡಿಕೊಂಡಿದ್ದು, ಈ 23 ಉಪನ್ಯಾಸಕರ ಹುದ್ದೆಗಳನ್ನು ತುಂಬಿಕೊಳ್ಳುವಂತೆ ಆರ್ಥಿಕ ಮತ್ತು ಶಿಕ್ಷಣ ಇಲಾಖೆ 2023ರ ಜುಲೈ 1ರಂದು ಆದೇಶ ಮಾಡಿದೆ. ಇವು ಹಳೆಯ ಹುದ್ದೆಗಳಾಗಿದ್ದು, ಇವುಗಳಿಗಾದರೂ ಪಪೂ ಇಲಾಖೆ ತಕ್ಷಣ ಅನುಮತಿ ನೀಡಬೇಕು ಎಂಬುದು ಆಡಳಿತ ಮಂಡಳಿಗಳ ಆಗ್ರಹವಾಗಿದೆ.
ಶಿಕ್ಷಕರಿಲ್ಲದಿದ್ದರೆ ಏನು ಪ್ರಯೋಜನ? ಸರ್ಕಾರ ಶಿಕ್ಷಣ ಕ್ಷೇತ್ರದ ಏಳಿಗೆಗಾಗಿ ಅನೇಕ ಯೋಜನೆ ಮತ್ತು ಸೌಲಭ್ಯಗಳನ್ನು ನೀಡಿದೆ. ಆದರೆ, ಶಾಲೆಯಲ್ಲಿ ಕಾಯಂ ಶಿಕ್ಷಕರು, ಉಪನ್ಯಾಸಕರಿಲ್ಲದಿದ್ದರೆ ಏನು ಪ್ರಯೋಜನ? ಎಂಬಂತಾಗಿದೆ.
ಸರ್ಕಾರ ಇತ್ತೀಚೆಗೆ 2015ರಿಂದ 2020ರವರೆಗೆ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಆಗಿರುವ ಬೋಧಕ ಹುದ್ದೆಗಳ ಭರ್ತಿಗೆ ಅವಕಾಶ ನೀಡಿದೆ. ಆದರೆ, ಎಸ್ಸಿ,ಎಸ್ಟಿ ಒಳ ಮೀಸಲು ಸಂಬಂಧ ಎಲ್ಲ ನೇಮಕಾತಿಗೆ ತಡೆ ನೀಡಿದೆ. ಆದಷ್ಟು ಬೇಗ ಒಳಮೀಸಲು ಕುರಿತು ಸಮೀಕ್ಷೆ ಪೂರ್ಣಗೊಳಿಸಿ ನೇಮಕಾತಿಗೆ ಚಾಲನೆ ನೀಡಬೇಕು. ಇಲ್ಲದಿದ್ದರೆ ಗ್ರಾಮೀಣ ಭಾಗದ ಅನುದಾನಿತ ಶಾಲಾ-ಕಾಲೇಜುಗಳು ಬಂದ್ ಆಗುವುದರಲ್ಲಿ ಅನುಮಾನವಿಲ್ಲ.
| ಎಸ್.ವಿ. ಸಂಕನೂರ ವಿಧಾನ ಪರಿಷತ್ ಸದಸ್ಯ
2015ಕ್ಕಿಂತ ಮುನ್ನ ಪಪೂ ಕಾಲೇಜುಗಳಲ್ಲಿ ಖಾಲಿ ಆಗಿರುವ 23 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ತಕ್ಷಣ ಅನುಮತಿ ನೀಡಬೇಕು. ಇವುಗಳಿಗೆ ಆರ್ಥಿಕ ಇಲಾಖೆ ಮತ್ತು ಶಿಕ್ಷಣ ಇಲಾಖೆ 2 ವರ್ಷಗಳ ಹಿಂದೆಯೇ ಅನುಮತಿ ನೀಡಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಪೂ ಇಲಾಖೆ ಕೂಡ ಹಳೆಯ ಹುದ್ದೆಗಳ ಭರ್ತಿಗೆ ಬೇಗ ಅನುಮತಿ ನೀಡಬೇಕು.
ಎಂ.ಪಿ. ಕರಬಸಪ್ಪ ನಿವೃತ್ತ ಪ್ರಾಚಾರ್ಯ