ಕೃಷಿ ಇಲಾಖೆ ಅಧಿಕಾರಿಗಳಿಂದ ಹೆಸರು ಬೆಳೆ ಪರಿಶೀಲನೆ

6-hbl ad agri
Published on

ಹುಬ್ಬಳ್ಳಿ: ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಬೆಳೆಗಳಾದ ಸೋಯಾಬೀನ್, ಹೆಸರು, ಉದ್ದು, ಶೇಂಗಾ ಬೆಳೆಗಳಲ್ಲಿ ಕಂಡು ಬರುವ ರೋಗ, ಕೀಟಭಾದೆ ನಿಯಂತ್ರಣಕ್ಕಾಗಿ ಕೃಷಿ ವಿಶ್ವ ವಿದ್ಯಾಲಯದ ಶಿಫಾರಸಿನ ಪ್ರಕಾರ ರೈತರು ಪೀಡೆನಾಶಕ ಸಿಂಪಡಿಸಿ ಹತೋಟಿ ಕ್ರಮ ಕೈಗೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ ತೆಂಬದ ತಿಳಿಸಿದ್ದಾರೆ.

ತಾಲೂಕಿನ ಅಮರಗೋಳ ಗ್ರಾಮದ ಹೊಲಕ್ಕೆ ಬುಧವಾರ ಭೇಟಿ ನೀಡಿ, ಹೆಸರು ಬೆಳೆ ಪರಿಶೀಲಿಸಿ ಅವರು ಮಾತನಾಡಿದರು. ಹೆಸರು ಮತ್ತು ಉದ್ದು ಬೆಳೆಗಳಲ್ಲಿ ನಂಜು ರೋಗ ಬಾಧಿತ ಎಲೆಗಳ ಮೇಲೆ ದಟ್ಟ ಮತ್ತು ತಿಳಿ ಹಳದಿ ಬಣ್ಣದ ಮಚ್ಚೆಗಳು ಕಾಣಿಸುತ್ತವೆ. ರೋಗಕ್ಕೆ ತುತ್ತಾದ ಸಸ್ಯಗಳನ್ನು ಪ್ರಾರಂಭದ ಹಂತದಲ್ಲಿಯೇ ಗುರುತಿಸಿ ಕಿತ್ತು ಚೀಲಗಳಲ್ಲಿ ಸಂಗ್ರಹಿಸಿ ಮಣ್ಣಿನಲ್ಲಿ ಹೂಳಬೇಕು. ರೋಗ ಹರಡುವುದನ್ನು ತಡೆಯಲು ಇಮಿಡಾಕ್ಲೊಪ್ರಿಡ್ 17.8 ಎಸ್​ಎಲ್ 0.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಅಥವಾ ಥೈಯಾಮಿಥಾಕ್ಸಮ್ 1 ಗ್ರಾಂ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.

ಕರಿಮೂತಿ ಹುಳುವಿನ ನಿರ್ವಹಣೆಗೆ 0.5 ಮೀ.ಲಿ ಲ್ಯಾಮಡಾಸೈಲೋಥ್ರಿನ್ 5 ಇಸಿ ಅಥವಾ 2 ಮೀ.ಲಿ ಪ್ರೋಫೆಪಾಸ್ 50 ಇಸಿ ಅಥವಾ 0.4 ಮೀ.ಲೀ. ಲ್ಯಾಮಡಾಸೈಲೋಥ್ರಿನ್+ ಕ್ಲೋರಾಂಟ್ನಿಲಿಪ್ರೋಲ್ ಅನ್ನು ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಬೂದಿ ರೋಗ ಹತೋಟಿಗಾಗಿ ಪ್ರತಿ ಲೀ. ನೀರಿಗೆ 1 ಮೀ.ಲೀ. ಹೆಕ್ಸಾಕೊನಾಜೋಲ್ 5 ಇ.ಸಿ. ಅಥವಾ 1 ಮೀ.ಲೀ. ಪ್ರೊಪಿಕೋನಾಜೋಲ್ 25 ಇ.ಸಿ. ಅಥವಾ 1 ಗ್ರಾಂ ಕಾರ್ಬನ್​ಡೈಜಿಮ್ ಶಿಲೀಂಧ್ರನಾಶಕ ಬೆರೆಸಿ ಸಿಂಪಡಿಸಬೇಕು.

ಸೋಯಾಅವರೆ ಬೆಳೆ 50 ದಿನಗಳಿದ್ದಾಗ 0.5 ಮೀ.ಲೀ. ಲ್ಯಾಮಡಾಸೈಲೋಥ್ರಿನ್ 5 ಇಸಿ ಅಥವಾ ಅಥವಾ 0.2 ಮಿ.ಲೀ. ಕ್ಲೋರೈಂಟ್ರಿನಿಪ್ರೋಲ್ 2 ಮೀ.ಲೀ. ಅಥವಾ 0.5 ಮಿ.ಲಿ ಲ್ಯಾಂಬ್ಡಾಸೈಯಾಲೋಥ್ರಿನ್ 5 ಇಸಿ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.ತುಕ್ಕು ರೋಗ ತಡೆಗೆ ಪ್ರತಿ ಲೀಟರ್ ನೀರಿಗೆ 1 ಮೀ.ಲೀ. ಹೆಕ್ಸಾಕೊನಾಜೋಲ್ 5 ಇ.ಸಿ. ಅಥವಾ 1 ಮೀ.ಲೀ. ಪೊ›ಪಿಕೋನಾಜೋಲ್ 25 ಇ.ಸಿ. ಅಥವಾ 1 ಮಿ.ಲೀ. ಟೆಬುಕೊನಾಜೋಲ್ ಅಥವಾ 10 ಮೀ.ಲೀ. ಬೇವಿನ ಎಣ್ಣೆ ಬೆರೆಸಿ ಸಿಂಪಡಿಸಬೇಕು.ಶೇಂಗಾ ಬೆಳೆಯಲ್ಲಿ ಎಲೆ ಸುರುಳಿ ಪೂಚಿ ಹುಳುವಿನ ನಿರ್ವಹಣೆಗೆ 1 ಗ್ರಾಂ ಅಸಿಫೇಟ್ 75 ಎಸ್​ಸಿ ಅಥವಾ 1 ಮೀ.ಲೀ. ಮಾನೋಕ್ರೋಟೊಫಾಸ್ 36 ಎಸ್.ಎಲ್ ಅಥವಾ 1 ಮಿ.ಲೀ. ಫ್ಲೂಬೆಂಡಿಯಾಮೈಡ್ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.

ಎಲೆ ತಿನ್ನುವ ಹುಳುವಿನ ನಿಯಂತ್ರಣಕ್ಕಾಗಿ 0.2 ಗ್ರಾಂ ಇಮಾಮೆಕ್ಟಿನ್ ಬೆಂಝೊಯೆಟ್ ಅಥವಾ 0.5 ಮಿ.ಲೀ. ಲ್ಯಾಂಬ್ಡಾಸೈಯಾಲೋಥ್ರಿನ್ 5 ಇಸಿ ಪ್ರತಿ ಲೀ. ನೀರಿಗೆ ಬೆರಸಿ ಸಿಂಪಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net