

ಸಂತೋಷ ವೈದ್ಯ ಹುಬ್ಬಳ್ಳಿ
ಬಿಜೆಪಿ ಆಡಳಿತವಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಗೆ ದಿನಾಂಕ (ಜೂ. 29) ನಿಗದಿಯಾಗುತ್ತಿದ್ದಂತೆ ಆಕಾಂಕ್ಷಿಗಳ ಪೈಪೋಟಿ ಒಂದೆಡೆಯಾದರೆ, ಸಂಖ್ಯಾಬಲದ ಲೆಕ್ಕಾಚಾರ ಮುನ್ನೆಲೆಗೆ ಬಂದಿದೆ.
82 ಸದಸ್ಯ ಬಲದ ಪಾಲಿಕೆಯಲ್ಲಿ ಜೆಡಿಎಸ್, ಪಕ್ಷೇತರ ಹಾಗೂ ಪದ ನಿಮಿತ್ತ ಸದಸ್ಯರ ಬೆಂಬಲದಿಂದ ಬಿಜೆಪಿ ಸಂಖ್ಯಾಬಲದಲ್ಲಿ ಮುಂಚೂಣಿಯಲ್ಲಿದೆ. ಆದರೆ, ಕಳೆದ ವರ್ಷ (2023-24) ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಯ ಕೆಲ ದಿನಗಳ ಮೊದಲು ಬಿಜೆಪಿ ‘ಆಪರೇಷನ್ ಹಸ್ತ’ದ ಭೀತಿ ಎದುರಿಸಿತ್ತು. ಬಿಜೆಪಿ ಸದಸ್ಯರು ರೆಸಾರ್ಟ್ ರಾಜಕೀಯಕ್ಕೆ ಮೊರೆ ಹೋಗಿದ್ದರು. 2 ದಿನಗಳ ಕಾಲ ದಾಂಡೆಲಿ ರೆಸಾರ್ಟ್ನಲ್ಲಿ ತಂಗಿದ್ದರು.
ಕಾಂಗ್ರೆಸ್ ಮುಖಂಡರ ಆಮಿಷಕ್ಕೆ ಸಿಲುಕಿ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆ ದಿನದಂದು ಪಕ್ಷದ ಸದಸ್ಯರು ಗೈರಾಗುವ ಸಾಧ್ಯತೆಗಳಿವೆಯೆಂದು ರೆಸಾರ್ಟ್ನಲ್ಲಿ ಕೂಡಿ ಹಾಕಲಾಗಿತ್ತು. ಗೈರಾಗುವ ಬಿಜೆಪಿ ಸದಸ್ಯರಿಗೆ ಕಾಂಗ್ರೆಸ್ ನಾಯಕರೊಬ್ಬರು ನಗದು ಹಣ ಮತ್ತು ವಾರ್ಡ್ನಲ್ಲಿ ಅಭಿವೃದ್ಧಿ ಕೆಲಸಗಳ ಆಮೀಷವೊಡ್ಡಿದ್ದರು ಎಂದು ಬಿಜೆಪಿಯ ಅಂದಿನ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಹಾಗೂ ಮಾಜಿ ಮೇಯರ್ ಈರೇಶ ಅಂಚಟಗೇರಿ ನೇರವಾಗಿ ಆರೋಪಿಸಿದ್ದರು. ಬಿಜೆಪಿ ಸದಸ್ಯರು ರೆಸಾರ್ಟ್ನಿಂದ ನೇರವಾಗಿ ಧಾರವಾಡಕ್ಕೆ ಬಂದು ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಯಲ್ಲಿ ಭಾಗಿಯಾಗಿದ್ದರು. ಆಪರೇಷನ್ ಹಸ್ತ ಠುಸ್ ಆಗಿತ್ತು.
ಈ ಬಾರಿ ರೆಸಾರ್ಟ್ ರಾಜಕೀಯದ ಸಾಧ್ಯತೆಗಳು ತುಂಬಾ ಕಡಿಮೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಸಂಖ್ಯಾಬಲದಲ್ಲಿ ಬಿಜೆಪಿ ಸಾಕಷ್ಟು ಮುಂಚೂಣಿಯಲ್ಲಿದೆ. ಪಾಲಿಕೆಯಲ್ಲಿ ಬಿಜೆಪಿಯ 38 ಸದಸ್ಯರಿದ್ದಾರೆ. ಜೆಡಿಎಸ್ನ ಏಕೈಕ ಸದಸ್ಯೆ ಲಕ್ಷ್ಮೀ ಹಿಂಡಸಗೇರಿ ಬೆಂಬಲ ಕಮಲ ಪಡೆಗೆ ಸಿಗಲಿದೆ. ಇತ್ತೀಚೆಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಇತ್ತು. ಪಕ್ಷೇತರರಾಗಿ ಆಯ್ಕೆಯಾಗಿದ್ದ ಕಿಶನ್ ಬೆಳಗಾವಿ, ಚಂದ್ರಿಕಾ ಮೇಸ್ತ್ರಿ ಹಾಗೂ ದುರ್ಗಮ್ಮ ಬಿಜವಾಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪದ ನಿಮಿತ್ತ ಸದಸ್ಯರಾದ ಸಂಸದ ಪ್ರಲ್ಹಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ್ ಹಾಗೂ ಎಸ್.ವಿ. ಸಂಕನೂರ ಮತಗಳಿಂದ ಬಿಜೆಪಿ ಸಂಖ್ಯಾಬಲ 48 ಆಗಲಿದೆ. ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಜಯಭೇರಿ ಬಾರಿಸಲು 45 ಮತಗಳು ಸಾಕು.
ಅತ್ತ ವಿರೋಧ ಪಕ್ಷ ಕಾಂಗ್ರೆಸ್ನಿಂದ 33 ಸದಸ್ಯರಿದ್ದಾರೆ. ಪಕ್ಷೇತರರಾದ ಚೇತನ ಹಿರೇಕೆರೂರ ಹಾಗೂ ಅಕ್ಷತಾ ಅಸುಂಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇನ್ನೋರ್ವ ಪಕ್ಷೇತರ ಸದಸ್ಯ ಮಂಜುನಾಥ ಬುರ್ಲಿ ಕಳೆದ ವರ್ಷ ಕಾಂಗ್ರೆಸ್ಗೆ ಬೆಂಬಲಿಸಿದ್ದರು. ಎಐಎಂಐಎಂನ ಮೂವರು ಸದಸ್ಯರು ಹಾಗೂ ಶಾಸಕರಾದ ಪ್ರಸಾದ ಅಬ್ಬಯ್ಯ ಹಾಗೂ ವಿನಯ ಕುಲಕರ್ಣಿ ಮತಗಳನ್ನು ಸೇರಿಸಿದರೆ ಕಾಂಗ್ರೆಸ್ ಸಂಖ್ಯಾಬಲ 41ಕ್ಕೆ ನಿಲ್ಲುತ್ತದೆ. ಕಾಂಗ್ರೆಸ್ ಅಧಿಕಾರ ಹಿಡಿಯಬೇಕಾದರೆ ಇನ್ನೂ 5-6 ಸದಸ್ಯರನ್ನು ಸೆಳೆಯಬೇಕು.
ಧಾರವಾಡ ಜಿಲ್ಲೆ ಪ್ರವೇಶಕ್ಕೆ ನ್ಯಾಯಾಲಯದ ನಿರ್ಬಂಧವಿರುವುದರಿಂದ ಕಳೆದ ವರ್ಷ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಯಲ್ಲಿ ಮತ ಚಲಾಯಿಸಲು ಶಾಸಕ ವಿನಯ ಕುಲಕರ್ಣಿಗೆ ಅವಕಾಶವಿರಲಿಲ್ಲ. ಆದರೆ, ನ್ಯಾಯಾಲಯದಿಂದ ಅನುಮತಿ ಪಡೆದು ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಅದೇ ರೀತಿ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಯಲ್ಲಿ ಮತ ಚಲಾಯಿಸಲು ನ್ಯಾಯಾಲಯ ಈ ಬಾರಿ ಅನುಮತಿ ನೀಡಬಹುದು.
ಪಾಲಿಕೆಯ ವಾರ್ಡ್ ನಂ. 54ರಿಂದ ಚುನಾಯಿತರಾಗಿದ್ದ ಬಿಜೆಪಿಯ ಸರಸ್ವತಿ ಧೋಂಗಡಿ ಅವರ ಸದಸ್ಯತ್ವ ರದ್ದುಗೊಳಿಸಿದ್ದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ಜೂ. 19ರಂದು ತಡೆ ನೀಡಿದ್ದು, ಸದಸ್ಯರಾಗಿ ಮುಂದುವರಿಯಲು ಅವರಿಗೆ ಅವಕಾಶ ನೀಡಿದೆ.
ಕಳೆದ ವರ್ಷ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆ ವೇಳೆ ಸರಸ್ವತಿ ಧೋಂಗಡಿ ಗೈರಾಗಿದ್ದರು. ಪಕ್ಷದ ವಿಫ್ ಉಲ್ಲಂಘಿಸಿದ್ದಾರೆಂದು ಧೋಂಗಡಿ ವಿರುದ್ಧ ಬಿಜೆಪಿ, ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿತ್ತು. ಈ ಕುರಿತು ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತರು 2024ರ ಫೆಬ್ರವರಿ 6ರಂದು ಧೋಂಗಡಿ ಅವರನ್ನು ಪಾಲಿಕೆ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಧೋಂಗಡಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಇದೀಗ ನ್ಯಾಯಾಲಯವು ಧೋಂಗಡಿ ಅವರಿಗೆ ಸದಸ್ಯರಾಗಿ ಮುಂದುವರಿಯಲು ಅವಕಾಶ ನೀಡಿರುವುದರಿಂದ ಪಾಲಿಕೆಯಲ್ಲಿ ಬಿಜೆಪಿಯ ಸಂಖ್ಯಾಬಲ 49 ಆಗಲಿದೆ. ಆದರೆ, ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಯ ಅಧ್ಯಕ್ಷಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ ಈಗಾಗಲೇ ಮತದಾರರ ಯಾದಿ ಹಾಗೂ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಹೀಗಿರುವಾಗ ಮತದಾರರ ಯಾದಿಯಲ್ಲಿ ಸರಸ್ವತಿ ಧೋಂಗಡಿ ಹೆಸರು ಸೇರ್ಪಡೆ ಕಷ್ಟ ಸಾಧ್ಯ ಎನ್ನಲಾಗುತ್ತಿದೆ.
‘ನ್ಯಾಯಾಲಯದ ತೀರ್ಪಿನ ಪ್ರತಿ ಸಿಕ್ಕ ಬಳಿಕ ಮತದಾನಕ್ಕೆ ಅವಕಾಶ ಕೋರುವಂತೆ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡುತ್ತೇವೆ’ ಎಂದು ಸರಸ್ವತಿ ಧೋಂಗಡಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಹು-ಧಾ ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಯಲ್ಲಿ ಬಿಜೆಪಿಗೆ ಅಗತ್ಯ ಸಂಖ್ಯಾಬಲವಿದ್ದು, ಜೂ. 28ರಂದು ಕೋರ್ ಕಮಿಟಿ ಸಭೆ ನಡೆಸಿ ಅಭ್ಯರ್ಥಿಯ ಹೆಸರು ಅಂತಿಮಗೊಳಿಸುತ್ತೇವೆ. ಈ ಬಾರಿ ರೆಸಾರ್ಟ್ ರಾಜಕೀಯದ ಪರಿಸ್ಥಿತಿ ಎದುರಾಗುವುದಿಲ್ಲ. | ಮಹೇಶ ಟೆಂಗಿನಕಾಯಿ, ಹು-ಧಾ ಸೆಂಟ್ರಲ್ ಶಾಸಕ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಲಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ಪ್ರಸಾದ ಅಬ್ಬಯ್ಯ ಹಾಗೂ ವಿನಯ ಕುಲಕರ್ಣಿ ಅವರೊಂದಿಗೆ ಬೆಂಗಳೂರಿನಲ್ಲಿ ಶುಕ್ರವಾರ ಚರ್ಚೆ ನಡೆಸಲಾಗುವುದು. | ಅಲ್ತಾಫ್ ಹಳ್ಳೂರ, ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ