ಹು-ಧಾ ಬೈಪಾಸ್: ಜನರ ಜೀವಕ್ಕೆ ಇಲ್ಲ ಗ್ಯಾರಂಟಿ

HUBLI DHARWAD BYPASS
Published on

ಮಂಜುನಾಥ ಎಸ್. ಅಂಗಡಿ ಧಾರವಾಡ

ಸಾವಿನ ಹೆದ್ದಾರಿ ಎಂಬ ಕುಖ್ಯಾತಿ ಗಳಿಸಿರುವ ನರೇಂದ್ರ- ಗಬ್ಬೂರ ಕ್ರಾಸ್ ನಡುವಿನ ಬೈಪಾಸ್ ರಸ್ತೆಯ ನಿರ್ವಹಣೆ ಮತ್ತು ರಸ್ತೆ ಬಳಕೆದಾರರ ಶುಲ್ಕ ಆಕರಣೆ ಸ್ಥಗಿತಗೊಂಡಿದೆ. ಈ ರಸ್ತೆಯನ್ನು ನಿರ್ವಹಣೆ ಮಾಡುತ್ತಿದ್ದ ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್ (ಎನ್​ಎಚ್​ಡಿಎಲ್) ಗುತ್ತಿಗೆ ಅವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಶುಲ್ಕ ಆಕರಣೆ ಬಂದ್ ಮಾಡಿದೆ. ಇದೀಗ ಈ ರಸ್ತೆಯಲ್ಲಿ ಟೋಲ್ ಇಲ್ಲ. ಸೂಕ್ತ ನಿರ್ವಹಣೆಯೂ ಇಲ್ಲದೆ ಜನರ ಜೀವಕ್ಕೆ ಗ್ಯಾರಂಟಿಯೂ ಇಲ್ಲದಂತಾಗಿದೆ.

ನರೇಂದ್ರ ಕ್ರಾಸ್ ಬಳಿಯ ಟೋಲ್ ಗೇಟ್ ಬಳಿ 6 ಟೋಲ್ ಪಾಯಿಂಟ್​ಗಳನ್ನು ನಿರ್ವಿುಸಲಾಗಿತ್ತು. ಹುಬ್ಬಳ್ಳಿ ಗಬ್ಬೂರ ಕ್ರಾಸ್​ನಿಂದ ಕೊಂಚ ದೂರ ಇದ್ದ ಟೋಲ್ ಗೇಟನ್ನೂ ತೆಗೆಯಲಾಗಿದೆ. ಕೇಂದ್ರ ಸರ್ಕಾರದ ನೆರವಿನಿಂದ ಷಟ್ಪಥ ಎಕ್ಸ್​ಪ್ರೆಸ್​ವೇ ನಿರ್ವಿುಸಲಾಗುತ್ತಿದ್ದು, ಎರಡೂ ಕಡೆಗಳಲ್ಲಿ ಟೋಲ್ ಗೇಟ್​ನ ಕುರುಹುಗಳು ಇದ್ದು, ಇನ್ನು ಕೆಲವೇ ದಿನಗಳಲ್ಲಿ ಅವೂ ತೆರವುಗೊಳ್ಳಲಿವೆ.

ಎನ್​ಎಚ್​ಡಿಎಲ್ ಕಂಪನಿಯು ಗುತ್ತಿಗೆ ಅವಧಿ ಸೆ. 6ರಂದು ಕೊನೆಗೊಳ್ಳುವ ಮೊದಲೇ ಟೋಲ್ ಪಾಯಿಂಟ್​ಗಳಲ್ಲಿ ನೋಟಿಸ್ ಅಂಟಿಸಿತ್ತು. ‘ಸೆ. 7ರ ಸಂಜೆ 6ರಿಂದ ಟೋಲ್ ಸಂಗ್ರಹಣೆಯನ್ನು ಸ್ಥಗಿತಗೊಳಿಸಲಾಗುವುದು. ನಂತರದಲ್ಲಿ ಬೈಪಾಸ್​ನಲ್ಲಿ ವಾಹನ ಸಂಚಾರದಲ್ಲಿ ಅಡೆತಡೆ, ಅಪಘಾತಗಳು ಹಾಗೂ ಇತರ ಘಟನೆಗಳು ಸಂಭವಿಸಿದರೆ, ತೆರವುಗೊಳಿಸುವ ಜವಾಬ್ದಾರಿ ಎನ್​ಎಚ್​ಡಿಎಲ್ ಕಂಪನಿಯದ್ದಲ್ಲ’ ಎಂಬ ಮಾಹಿತಿಯುಳ್ಳ ಸಾರ್ವಜನಿಕ ಪ್ರಕಟಣೆ ಅಂಟಿಸಲಾಗಿತ್ತು.

ನರೇಂದ್ರ ಕ್ರಾಸ್ ಮತ್ತು ಗಬ್ಬೂರ ಕ್ರಾಸ್ ಬಳಿ ಇದ್ದ ಟೋಲ್ ಗೇಟ್​ಗಳಲ್ಲಿ ಹತ್ತಾರು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಆದರೀಗ ಟೋಲ್ ಪಾಯಿಂಟ್​ಗಳನ್ನು ತೆರವುಗೊಳಿಸಲಾಗಿದೆ. ಇದರಿಂದಾಗಿ ವಾಹನ ಅಪಘಾತ ಪ್ರಕರಣಗಳು ನಡೆದರೆ ಅವುಗಳ ಪತ್ತೆ ಪೊಲೀಸರಿಗೆ ತಲೆನೋವಾಗಿದೆ. ಸಾವು- ನೋವುಗಳು ಸಂಭವಿಸಿದರೂ ‘ಅಪರಿಚಿತ ವಾಹನ ಡಿಕ್ಕಿ’ ಎಂದು ಪ್ರಕರಣ ದಾಖಲಾಗುತ್ತಿವೆ. ಅಪರಿಚಿತ ವಾಹನಗಳ ಪತ್ತೆಗೆ ಪೊಲೀಸರು ಊರೂರು ಅಲೆಯುವಂತಾಗಿದೆ.

ಮೊದಲಿದ್ದ ದ್ವಿಪಥದಲ್ಲೇ ವಾಹನಗಳ ಸಂಚಾರ ಸಾಗಿದೆ. ಅದರ ಆಚೀಚೆ ನೂತನ ರಸ್ತೆ ನಿರ್ವಣಗೊಳ್ಳುತ್ತಿದೆ. ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದ್ದು, ಕೆಲವೆಡೆ ಇನ್ನೂ ಆರಂಭವೇ ಆಗಿಲ್ಲ. ಅಷ್ಟಿಷ್ಟು ನಿರ್ವಣಗೊಂಡಿರುವ ಹೊಸ ರಸ್ತೆಗಳು ರೈತರ ಫಸಲು ಒಕ್ಕಣೆಯ ಕಣಗಳಾಗಿವೆ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರು ಶೇಂಗಾ, ಉದ್ದು, ಹೆಸರು, ಸೋಯಾಬೀನ್ ಫಸಲನ್ನು ತಂದು ಹಾಕಿದ್ದಾರೆ. ಮಳೆ ಇಲ್ಲದ ಸಂದರ್ಭದಲ್ಲಿ ಕಾಳು ಒಕ್ಕಣೆ ಕಾರ್ಯ ನಡೆಯುತ್ತಿದೆ.

ಗುತ್ತಿಗೆ ಅವಧಿ ಮುಗಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್​ನ ಟೋಲ್ ವ್ಯವಸ್ಥೆ ಸ್ಥಗಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಷಟ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ನರೇಂದ್ರ ಕ್ರಾಸ್ ಹಾಗೂ ಗಬ್ಬೂರ ಕ್ರಾಸ್​ನಲ್ಲಿದ್ದ ಟೋಲ್​ಗೇಟ್​ಗಳನ್ನು ತೆಗೆದಿದ್ದಾರೆ. ಬೈಪಾಸ್​ನಲ್ಲಿ ಅಗತ್ಯ ಇದ್ದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಲಾಗುವುದು. ಅದಕ್ಕಾಗಿ ಈಗಾಗಲೇ ಸ್ಥಳ ಗುರುತಿಸಲಾಗಿದೆ. - ಡಾ. ಗೋಪಾಲ ಬ್ಯಾಕೋಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net