

ನಾಲತವಾಡ: ಪಟ್ಟಣದ ಬಸ್ ನಿಲ್ದಾಣದ ಮುಖ್ಯ ಪ್ರವೇಶ ದ್ವಾರದ ಬಳಿ ಸದಾ ಜನ ಸಂದಣಿಯಿಂದ ತುಂಬಿರುತ್ತದೆ. ಬಸ್ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸೋಮವಾರ ಸಂತೆಯ ದಿನವಂತೂ ಸಮಸ್ಯೆ ಹೇಳತೀರದು.
ನಿತ್ಯ ಸಹಸ್ರಾರು ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬರುತ್ತಾರೆ. ಸೋಮವಾರ ಈ ಸಂಖ್ಯೆ ದ್ವಿಗುಣ ಕೊಂದಿರುತ್ತದೆ. ನಿಲ್ದಾಣದ ಒಳಗೆ ಹೋಗಲು ಮತ್ತು ಹೊರ ಬರಲು ಪರದಾಡುವಂತಾಗಿದೆ. ಇವುಗಳ ಮಧ್ಯೆ ಖಾಸಗಿ ವಾಹನಗಳ ಹಾವಳಿ ಹೆಚ್ಚಾಗಿದೆ.
ಪ್ರಯಾಣಿಕರಿಗಾಗಿಯೇ ಇರುವ ಮುಖ್ಯ ಪ್ರಮೇಶ ದ್ವಾರಕ್ಕೆ ಅಡ್ಡಲಾಗಿ ಒಳಗೆ ಹೋಗುವುದಕ್ಕೂ ಜಾಗ ಇಲ್ಲದಂತೆ ಮೆಟ್ಟಿಲುಗಳ ಮುಂದೆ ಸೋಮವಾರ ಸಂತೆಯ ದಿನ ಮಿಠಾಯಿ ಅಂಗಡಿಗಳನ್ನು ಸಾಲಾಗಿ ಹಾಕಿಕೊಂಡು ವ್ಯಾಪಾರ ಮಾಡುವುದರಿಂದ ದಾರಿ ಬಂದ್ ಆಗುತ್ತದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಸಂತೆಗಾಗಿ ಬೇರೆ ಸ್ಥಳವಕಾಶ ಒದಗಿಸಿಕೊಡವ ಮೂಲಕ ಸಮಸ್ಯೆಗೆ ಪರಿಹಾರ ನೀಡಬೇಕಿದೆ.
ಇಲ್ಲಿ ಅಂಗಡಿಗಳನ್ನು ಹಾಕ ಬೇಡಿ ಎಂದು ಕಂಟ್ರೋಲರ್ ಹೇಳಿದರೂ ಯಾರೂ ಅವರ ಮಾತು ಕೇಳುತ್ತಿಲ್ಲ. ಈ ಕುರಿತು ನಾಗರಿಕರಾದ ಲಕ್ಕಪ್ಪ ನಾಗರಬೆಟ್ಟ, ರಾಜಶೇಖರ ಜಾವೂರ, ಶಿವಪುತ್ರಪ್ಪ ತಾಳಿಕೋಟಿ ಬೇಸರ ಹೊರಹಾಕಿದರು.