ಅವಸಾನದಂಚಿನಲ್ಲಿ ಅಗಸಿ ಕಮಾನ

The arch of Agassiz at the end
ಕಿಲ್ಲಾಗಲ್ಲಿ ಅಗಸಿ ಕಮಾನ ಅವಸಾನದ ಅಂಚಿಗೆ ತಲುಪಿದೆ
Published on

ಮುದ್ದೇಬಿಹಾಳ : ಪಟ್ಟಣದ ಹಳೇ ಕಿಲ್ಲಾ ಗಲ್ಲಿಯಲ್ಲಿರುವ ಐತಿಹಾಸಿಕ ಕೋಟೆ ಗೋಡೆಗೆ ಅಂಟಿಕೊಂಡಿದ್ದ ಕಿಲ್ಲಾಗಲ್ಲಿ ಅಗಸಿ ಕಮಾನ ಅವಸಾನದ ಅಂಚಿಗೆ ತಲುಪಿದೆ. ಯಾವಾಗ ಬೀಳುತ್ತದೆಯೋ? ಯಾವ ಅನಾಹುತ ಸಂಭವಿಸುತ್ತದೆಯೋ? ಎಂಬ ಭಯದಲ್ಲಿ ಇಲ್ಲಿನ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.

ತಾಲೂಕಿನ ಬಸರಕೋಡ ನಾಡಗೌಡರ ಪೂರ್ವಜರಾದ ಪರಮಣ್ಣ ಎನ್ನುವವರು 1680 ರಲ್ಲಿ ಅಗಸಿ ಕಮಾನ ಕಟ್ಟಿಸಿದ್ದರು. ಅದೇ ಮನೆತನದ ಹುಚ್ಚಪ್ಪ 1720 ರಲ್ಲಿ ಕೋಟೆ ಕಟ್ಟಿಸಿದ್ದರು ಎಂಬ ಉಲ್ಲೇಖವಿದೆ. ಅಂದಿನ ಮುದ್ದಬ್ಬೇ ಊರು ಮುದ್ದೇಬಿಹಾಳಾಗಿ ಪರಿವರ್ತನೆಗೊಂಡು ಇಂದು ಹಲವು ಮೂಲ ಸೌಲಭ್ಯಗಳಿಂದ ಜನಸಂಖ್ಯೆಯಿಂದ ಬೃಹದಾಕಾರವಾಗಿ ಬೆಳೆದು ನಿಂತಿದೆ.

ಕಿಲ್ಲಾ ಗಲ್ಲಿಯೂ ಈ ಹಿಂದೆ ಮುದ್ದೇಬಿಹಾಳದ ಹಳೇ ಊರಾಗಿತ್ತು. ಇಲ್ಲಿ ರಾಜ ಕಾಲುವೆಯೂ ಕೂಡ ಇದ್ದು, ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ಕೋಟೆ ಗೋಡೆ ಒಳಗೆ ಐದು ಬಾವಿಗಳನ್ನು ಬಸರಕೋಡ ನಾಡಗೌಡ ಮನೆತನದವರು ನಿರ್ಮಿಸುವ ಮೂಲಕ ಒಂದೊಂದು ಬಾವಿಗೆ ತಮ್ಮ ಮನೆತನದ ಹೆಣ್ಣು ಮಕ್ಕಳ ಹೆಸರು ಇಟ್ಟಿದ್ದರು ಎಂದು ಹೇಳಲಾಗುತ್ತಿದೆ.

ಜತೆಗೆ ಈ ಭಾಗದಲ್ಲಿ ಅಮರಶಿಲ್ಪಿ ಜಕಣಾಚಾರಿ ನಿರ್ಮಿಸಿದ ಪ್ರಾಚಿನ ಈಶ್ವರ ದೇವಸ್ಥಾನ, ಹನುಮಂತ ದೇವಸ್ಥಾನಗಳಿವೆ. ಹಾಗೆಯೇ ತಾಳಿಕೋಟೆಯ ಮಹಾನ್​ ತಪಸ್ವಿ ಶರಣ ಖಾಸ್ಗತೇಶ್ವರ ಶ್ರೀಗಳು ತಪೋವನವೂ ಇದೆ. ಪುರಾತತ್ವ ಇಲಾಖೆ, ತಾಲೂಕು ಆಡಳಿತ ಹಾಗೂ ಸ್ಥಳಿಯ ಪುರಸಭೆ ಅಧಿಕಾರಿಗಳು ಐತಿಹಾಸಿಕ ಕಿಲ್ಲಾ ಗಲ್ಲಿಯ ಕೋಟೆ ಗೋಡೆ ಹಾಗೂ ಅಗಸಿಯ ಮುಖ್ಯದ್ವಾರದ ಕಮಾನ ಹಾಗೂ ದೇವಸ್ಥಾನಗಳನ್ನು ಸಂರಣೆ ಮಾಡುವತ್ತ ಚಿತ್ತ ಹರಿಸಿಲ್ಲ.

ಕಿಲ್ಲಾ ಅಗಸಿ ಮುಖ್ಯ ದ್ವಾರದ ಕಮಾನವು ಅಪಾಯದಂಚಿಗೆ ತಲುಪಿದೆ. ಪುರಾತತ್ವ ಇಲಾಖೆಯವರು ಐತಿಹಾಸಿಕ ಕೋಟೆ ಗೋಡೆ ರಣೆ ಮಾಡುವಲ್ಲಿ ವಿಶೇಷ ಕಾಳಜಿ ವಹಿಸಬೇಕಿದೆ ಎಂಬುದು ಇಲ್ಲಿನ ಜನರ ಅಭಿಪ್ರಾಯವಾಗಿದೆ.

ಕೋಟೆ ಗೋಡೆ, ಅಗಸಿಗೆ ಹೊಂದಿಕೊಂಡು ನೂರಕ್ಕೂ ಹೆಚ್ಚು ಕುಟುಂಬಗಳು ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಪಟ್ಟಣ ಸೇರಿ ತಾಲೂಕಿನಾದ್ಯಂತ ವಿಪರೀತ ಮಳೆ ಸುರಿಯುತ್ತಿರುವುದರಿಂದ ಗೋಡೆಗಳು ನೆನೆದು ಬೀಳುವ ಹಂತದಲ್ಲಿವೆ. ಕೋಟೆ ಗೋಡೆಯಾಗಲಿ ಅಥವಾ ಕಿಲ್ಲಾ ಅಗಸಿ ಮುಖ್ಯದ್ವಾರದ ಕಮಾನ ಆಗಲಿ ಕುಸಿದು ಬಿದ್ದರೆ ಸಾಕಷ್ಟು ಸಾವು&ನೋವು ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net