

ಆಲಮಟ್ಟಿ: ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರದ ನೀರಿನ ಮಟ್ಟ ಹೆಚ್ಚಿಸುವುದು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ೂಷಿಣೆ ಮಾಡುವುದು ಸೇರಿ ವಿವಿಧ ಬೇಡಿಕೆಗೆ ಆಗ್ರಹಿಸಿ ಜೂ.30 ರಂದು ನಿಡಗುಂದಿಯಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶ ಹಾಗೂ ಚಳವಳಿ ನಿಮಿತ್ತ ಶನಿವಾರ ಯಲಗೂರ ಗ್ರಾಮದ ಯಲಗೂರೇಶ್ವರ ದೇವಸ್ಥಾನದಲ್ಲಿ ಹುಣಶ್ಯಾಳದ ಸಂಗನಬಸವ ಶ್ರೀಗಳು ಕರ ಪತ್ರ ಬೀಡುಗಡೆ ಮಾಡಿ ಪ್ರಚಾರಕ್ಕೆ ಚಾಲನೆ ನೀಡಿದರು.
ಹೋರಾಟ ಸಮಿತಿ ಮುಖಂಡ ಅರವಿಂದ ಕುಲಕರ್ಣಿ, ಶಂಕರ ಹಿರೇಗೌಡ, ಪಾಂಡು ಹ್ಯಾಟಿ ಮಾತನಾಡಿ, ಜಲಾಶಯದ ನೀರಿನ ಮಟ್ಟವನ್ನು ಎತ್ತರಿಸಲು 2010 ರಲ್ಲಿಯೆ ನ್ಯಾ.ಬ್ರಿಜೇಷ ಕುಮಾರ ನೇತೃತ್ವದಲ್ಲಿ ಎರಡನೇ ನ್ಯಾಯಾಧೀಕರಣ ತೀರ್ಪು ನೀಡಿದೆ. 2013 ರಲ್ಲಿ ಅಂತಿಮ ತೀರ್ಪು ಪ್ರಟಿಸಿದೆ.15 ವರ್ಷ ಗತಿಸಿದರೂ ಇಲ್ಲಿಯವರೆಗೆ ನೀರಿನ ಮಟ್ಟ ಹೆಚ್ಚಿಸಲು ಸರ್ಕಾರಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಜೂ.30 ರಂದು ನಿಡಗುಂದಿ ಮುದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡು ನಂತರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಖುದ್ದಾಗಿ ಸಮಾವೇಶದ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಕೆ.ಬಿ.ಜೆ.ಎನ್.ಎಲ್ ಮುಖ್ಯಅಭಿಯಂತರರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಆಗಮಿಸಿ ಮನವಿ ಸ್ವೀಕರಿಸಬೇಕೆಂದು ಹೋರಾಟ ಸಮಿತಿಯ ಮುಖಂಡರು ಒತ್ತಾಯಿಸಿದ್ದಾರೆ.
ಸಂಗನಬಸವ ಶ್ರೀಗಳು ಮಾತನಾಡಿ, ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದರೆ ನಾಡಿನ ಎಲ್ಲ ಮಠಾಧೀಶರು ರೈತರೊಂದಿಗೆ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಉಮೇಶ ವಾಲಿಕಾರ, ಶರಣಗೌಡ ಬಿರಾದಾರ, ಬಾಲಪ್ಪಗೌಡ ಲಿಂಗದಳ್ಳಿ, ಹೋನಕೆರೆಪ್ಪ ತೆಲಗಿ, ಸುಬಾಸಗೌಡ ಬೀಸಿರೊಟ್ಟಿ, ರಾಜಕುಮಾರ ರೆಡ್ಡಿ, ಹಣಮಂತ್ರಾಯ ಗುಣಕಿ, ಪ್ರಬುಗೌಡ ಪಾಟೀಲ, ಶಿವಶರಣ ರೆಡ್ಡಿ, ಸಿದ್ದನಗೌಡ ಬಿರಾದಾರ, ಬಸನಗೌಡ ಪಾಟೀಲ, ಮಾಳಪ್ಪ ಬೂದಿಹಾಳ, ಹಣಮಂತ ಕಲಬುರ್ಗಿ ಸೇರಿದಂತೆ ಮತ್ತಿತರರಿದ್ದರು.