ರಸ್ತೆಯಲ್ಲೋ ಅಣ್ಣಾ... ಇದು ಕೆಸರು ಗದ್ದೆ

On the road, brother... this is a muddy field.
ಇಂಡಿ ಪಟ್ಟಣದ ಮಹಾವೀರ ವತ್ತದಿಂದ ಹಿರೇಇಂಡಿ ಮಾರ್ಗವಾಗಿ ಸರಕಾರಿ ಪ್ರೌಢಶಾಲೆಗೆ ತೆರಳುವ ರಸ್ತೆ ಕೆಸರು ಗದ್ದೆಯಂತಾಗಿರುವುದು.
Published on

ಇಂಡಿ: ಪಟ್ಟಣದಲ್ಲಿನ ಹಿರೇಇಂಡಿ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಹೋಗಬೇಕಾದರೆ ವಿದ್ಯಾರ್ಥಿಗಳು ಹರಸಾಹಸ ಪಡಬೇಕಾದ ದುಸ್ಥಿತಿ ನಿರ್ಮಾಣವಾಗಿದ್ದು ರಸ್ತೆ ಸಂಪೂರ್ಣ ಹಾಳಾಗಿ ಕೆಸರು ಗದ್ದೆಯಾಗಿದೆ.

ಜೂನ್​ ತಿಂಗಳು ಶಾಲೆ ಆರಂಭಗೊಂಡಿದ್ದು, ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಸಮರ್ಪಕ ರಸ್ತೆ ಇಲ್ಲ. ಹಲವು ವರ್ಷಗಳಿಂದ ಇದೇ ದುಸ್ಥಿತಿ ಇದೆ. ಎರಡ್ಮೂರು ದಿನದಿಂದ ಸುರಿದ ಮಳೆ ನೀರು ಸಂಗ್ರಹವಾಗಿ ಸಮಸ್ಯೆಯಾಗುತ್ತಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳು ಮಲಿನ ನೀರು ದಾಟಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪುರಸಭೆಯವರು ರಸ್ತೆ ರಿಪೇರಿ ಗೋಜಿಗೆ ಹೋಗಿಲ್ಲ. ಹೀಗಾಗಿ ಆ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ನಾಲ್ಕು ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೆ ರಸ್ತೆಯಲ್ಲಿ ಗರಸು ಹಾಕಿಸಿ ವಿದ್ಯಾರ್ಥಿಗಳು ನಡೆದುಕೊಂಡು ಹೋಗುವಂತೆ ರಸ್ತೆ ನಿರ್ಮಿಸಬೇಕೆಂದು ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಬಹಳ ವರ್ಷಗಳಿಂದಲೂ ರಸ್ತೆ ಸಮಸ್ಯೆ ಇದೆ. ಮಳೆಗಾಲದಲ್ಲಿ ಮಕ್ಕಳು, ಶಿಕರು ಶಾಲೆಗೆ ಬಂದು ಹೋಗಲು ಸಾಕಷ್ಟು ತೊಂದರೆಯಾಗುತ್ತಿದೆ. ಉತ್ತಮ ರಸ್ತೆ ಮಾಡುವಂತೆ ಪುರಸಭೆಯವರಿಗೆ, ಶಾಸಕರಿಗೆ ಮನವಿ ಮಾಡಿಕೊಂಡಿದ್ದೇವೆ ಆದರೆ ರಸ್ತೆ ನಿರ್ಮಾಣ ಇನ್ನೂ ಆಗಿಲ್ಲ ಎಂದು ಬಹುತೇಕ ಶಿಕರು ಬೇಸರ ವ್ಯಕ್ತಪಡಿಸಿದರು.

ನಾನು ಈಗ ಹತ್ತನೇ ತರಗತಿ ಓದುತ್ತಿದ್ದೇನೆ. 8ನೇ ತರಗತಿಯಿಂದ ಇಲ್ಲೇ ಕಲಿಯುತ್ತಿದ್ದೇನೆ. ಆವಾಗಿನಿಂದಲೂ ಈ ರಸ್ತೆ ಹೀಗೇ ಇದೆ. ಯಾರೂ ರಸ್ತೆ ನಿರ್ಮಾಣ ಮಾಡಿಲ್ಲ. ಇದು ಸರಕಾರಿ ಶಾಲೆ, ಇಲ್ಲಿಗೆ ಅಧಿಕಾರಿಗಳು, ರಾಜಕಾರಣಿಗಳ ಮಕ್ಕಳು ಬರಲ್ಲ. ನಮ್ಮಂತಹ ಬಡ ವಿದ್ಯಾರ್ಥಿಗಳೇ ಬರಬೇಕು. ಹೀಗಾಗಿ ಬೇರೆಯವರ ಮಕ್ಕಳ ಕಷ್ಟ ರಾಜಕಾರಣಿಗಳು, ಅಧಿಕಾರಿಗಳಿಗೆ ಅರ್ಥವಾಗಲ್ಲ ಎಂದು ವಿದ್ಯಾರ್ಥಿ ಮಲ್ಲಿಕಾರ್ಜುನ ಗಾಣಿಗೇರ ಬೇಸರ ವ್ಯಕ್ತಪಡಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net