ಮಾಧ್ಯಮ ಕ್ಷೇತ್ರದಲ್ಲಿಯೇ ವಿನೂತನ ಪ್ರಯೋಗ

An innovative experiment in the media field
ವಿಜಯಪುರ ನಗರದ ರೂಪಾದೇವಿ ಪಿಯು ಕಾಲೇಜ್​ನ ವಿದ್ಯಾರ್ಥಿಗಳು ವಿಆರ್​ಎಲ್​ ಸೂಪರ್​ಬಸ್​ನಲ್ಲಿ ಪ್ರಯಾಣಿಸಿ ವಿಜಯವಾಣಿ ದರ್ಶನಕ್ಕೆ ಆಗಮಿಸಿದ ಸಂದರ್ಭ.
Published on

ವಿಜಯಪುರ: ಪತ್ರಿಕಾಲಯಕ್ಕೆ ವಿದ್ಯಾರ್ಥಿಗಳನ್ನು ಕರೆಯಿಸಿ ಓದುವ ಅಭಿರುಚಿ ಮೂಡಿಸುತ್ತಿರುವ "ವಿಜಯವಾಣಿ ದರ್ಶನ' ಕಾರ್ಯಕ್ರಮ ಮಾಧ್ಯಮ ಕ್ಷೇತ್ರದಲ್ಲಿಯೇ ವಿನೂತನ ಪ್ರಯೋಗ ಎಂದು ರೂಪಾದೇವಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಹೇಮಲತಾ ಪಾಟೀಲ ಬಣ್ಣಿಸಿದರು.

ವಿಜಯಪುರ ನಗರದ ರೂಪಾದೇವಿ ಪದವಿಪೂರ್ವ ಕಾಲೇಜಿನ 70ಕ್ಕೂ ಅಧಿಕ ವಿದ್ಯಾರ್ಥಿಗಳೊಂದಿಗೆ ವಿಆರ್​ಎಲ್​ ಸೂಪರ್​ ಬಸ್​ನಲ್ಲಿ ಶುಕ್ರವಾರ ವಿಜಯವಾಣಿ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ಕೇವಲ ಪತ್ರಿಕೆ ಹೊರತರುವುದಷ್ಟೆ ಪತ್ರಿಕೆಯ ಕಾರ್ಯ ಎಂದು ಭಾವಿಸಿದ್ದೆ ಆದರೆ ವಿಜಯವಾಣಿಯ ಸಾಮಾಜಿಕ ಕೈಂಕರ್ಯ ಕಂಡು ಹೆಮ್ಮೆ ಎನಿಸಿತು ಎಂದು ಹೇಳಿದರು.

ಸಂವಿಧಾನದ ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಪತ್ರಿಕೆಗಳು ಸಮಾಜದ ಕಾವಲುಗಾರನಂತೆ ನಾಲ್ಕನೇ ಅಂಗದಂತೆ ಸೇವೆ ಸಲ್ಲಿಸುತ್ತಿರುವುದು ಶ್ಲಾನೀಯ. ಪತ್ರಕರ್ತರು ಕಾಲದ ಅರಿವಿಲ್ಲದೆ ಕೆಲಸಮಾಡುವುದನ್ನು ಕಂಡು ಅವರ ಬಗ್ಗೆ ಹೆಮ್ಮೆ ಎನಿಸಿತು. ಪತ್ರಿಕೆ ನಡೆಸುವ ಹಿಂದಿರುವ ಕಷ್ಟದ ಅರಿವಾಯಿತು ಎಂದರು.

ಸ್ಥಾನಿಕ ಸಂಪಾದಕ ಕೆ.ಎನ್​. ರಮೇಶ್​ ಮಾತನಾಡಿ, ಪತ್ರಿಕೆಗಳು ಪ್ರಾಮಾಣಿಕ ಹಾಗೂ ನಿಖರ ಸುದ್ದಿಗಳನ್ನು ಓದುಗರಿಗೆ ನೀಡುತ್ತವೆ. ಇಂದಿನ ಯುವ ಪೀಳಿಗೆ ತಮ್ಮ ಪಠ್ಯದ ಜೊತೆಗೆ ಪತ್ರಿಕೆಗಳನ್ನೂ ನಿತ್ಯ ಓದುವುದರಿಂದ ದೈನಂದಿನ ವಿದ್ಯಮಾನಗಳ ಅರಿವು ವೃದ್ಧಿಯಾಗುವುದರ ಜೊತೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗುತ್ತದೆ. ಸಮಾಜದ ಕನ್ನಡಿಯಂತೆ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿದೆ. ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸವನ್ನು ವಿಜಯವಾಣಿ ಪ್ರಾಮಾಣಿಕವಾಗಿ ಮಾಡಿಕೊಂಡು ಬರುತ್ತಿದ್ದು, ಓದುಗರ ಮನವನ್ನು ಗೆದ್ದಿದೆ. ಇದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವೇ ಕಾರಣ ಎಂದು ಹೇಳಿದರು.

ಪ್ರತಿ ಶುಕ್ರವಾರ ವಿಜಯವಾಣಿ ಕಚೇರಿ ದರ್ಶನ ಹಮ್ಮಿಕೊಂಡಿದ್ದು, ವಿಜಯಪುರ ನಗರದ ವಿವಿಧ ಶಾಲೆ&ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಸಂ&ಸಂಸ್ಥೆಗಳ ಪ್ರತಿನಿಧಿಗಳು ಆಗಮಿಸಿ ಸುದ್ದಿಮನೆಯ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವೀಕ್ಷಕರಿಂದ ವ್ಯಕ್ತವಾಗುತ್ತಿದೆ. ವಿವಿಧ ಶಿಕ್ಷಣ ಸಂಸ್ಥೆಯವರು ವಿಜಯವಾಣಿ ಕಚೇರಿ ವೀಕ್ಷಣೆಗೆ ಉತ್ಸುಕರಾಗಿದ್ದಾರೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಸುದ್ದಿಮನೆ ವೀಕ್ಷಿಸಿದ ಪ್ರತಿಯೊಬ್ಬರೂ ಬಣ್ಣಿಸುತ್ತಿದ್ದಾರೆ ಎಂದರು.

ವಿದ್ಯಾರ್ಥಿಗಳು ಸುದ್ದಿಮನೆಯ ಪ್ರಮುಖ ವಿಭಾಗಗಳಾದ ಸಂಪಾದಕೀಯ, ವರದಿಗಾರಿಕೆ, ಜಾಹೀರಾತು, ಪ್ರಸರಣ ವಿಭಾಗದ ಸಮಗ್ರ ಮಾಹಿತಿ ಪಡೆದುಕೊಂಡರು. ಮುದ್ರಣ ವಿಭಾಗಕ್ಕೆ ಕರೆದೊಯ್ದು ಸಿಟಿಪಿ, ಪ್ಲೇಟ್​ ಮೇಕಿಂಗ್​, ಕಲರ್​ ಕಾಂಬಿನೇಷನ್​, ಮುದ್ರಣ ಮುಂತಾದ ವಿಷಯಗಳ ಕುರಿತು ಪೂರ್ಣ ಮಾಹಿತಿ ನೀಡಲಾಯಿತು.

ಮುದ್ರಣ ವಿಭಾಗದ ಉಸ್ತುವಾರಿ ರವಿ ಗುಡಗೇರಿ, ಜಾಹೀರಾತು ವಿಭಾಗದ ನಿಖಿಲ್​ ಹೊಳ್ದೂರ, ಪ್ರಸರಣ ವಿಭಾಗದ ಮುಖ್ಯಸ್ಥ ಈರಣ್ಣ ಅವಟಿ, ಸಂತೋಷ ಗೋಡಿಕಟ್ಟಿ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net