

ವಿಜಯಪುರ: ಕೂಲಿಕಾರ್ಮಿಕರ ಕೊರತೆಯಿಂದಾಗಿ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದು, ಕೃಷಿ ಪದವೀಧರರು ಡ್ರೋನ್ ತರಬೇತಿ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಹೇಳಿದರು.
ನಗರದ ಕೃಷಿ ಮಹಾವಿದ್ಯಾಲಯದಲ್ಲಿ ಬೆಂಗಳೂರಿನ ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಆಶ್ರಯದಲ್ಲಿ ಸಮಾಜ ಕಲ್ಯಾಣ ಇಲಾಖೆಯು ಕೃಷಿ ಪದವೀಧರಿಗಾಗಿ ಹಮ್ಮಿಕೊಂಡಿದ್ದ ಹ್ಯಾಂಡ್ಸ್ ಆನ್ ಸಿಮ್ಯುಲೇಟರ್ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಕೃಷಿಯಲ್ಲಿ ಅನೇಕ ಅನ್ವೇಷಣೆಗಳಾಗಿವೆ, ಇನ್ನು ಆಗುತ್ತಿಲಿವೆ. ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಲು ಸುಧಾರಿತ ತಾಂತ್ರಿಕತೆಗಳ ಅಳವಡಿಕೆ ಅವಶ್ಯಕವಾಗಿದೆ. ಈ ಹಿನ್ನೇಲೆಯಲ್ಲಿ ಕೃಷಿ ಪದವೀಧರರು ತರಬೇತಿ ಪಡೆದುಕೊಂಡು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಅವರನ್ನು ಅರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಬೇಕಾಗಿದೆ ಎಂದರು.
ಅಧ್ಯತೆ ವಹಿಸಿದ್ದ ಡೀನ್ ಡಾ. ಅಶೋಕ ಎಸ್. ಸಜ್ಜನ ಮಾತನಾಡಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ತರಬೇತಿಗಾಗಿ ಬೆಂಗಳೂರಿಗೆ ಕಳಿಸಿ, ಅವರನ್ನು ಯಶಸ್ವಿ ತರಬೇತಿದಾರರನ್ನಾಗಿ ರೂಪಿಸಲಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಕೇಶವ ಮಾತನಾಡಿ, ವಿದ್ಯಾರ್ಥಿಗಳಿಗೆ ಎರಡು ದಿನಗಳ ಹ್ಯಾಂಡ್ ಆನ್ ಸಿಮುಲೇಟರ್ ತರಬೇತಿ, ಮೂರು ದಿನಗಳ ಪ್ರಾಯೋಗಿಕ ಹಾರಾಟ ತರಬೇತಿ ನೀಡಲಾಗುತ್ತದೆ ಎಂದರು.
ಪ್ರಾಧ್ಯಾಪಕ ಡಾ.ಮಹಾಂತೇಶ ತೆಗ್ಗಿ, ಡಾ.ರಮೇಶ ಬೀರಗೆ, ಡಾ.ಸುದೀಪ ಕುಮಾರ ಹಾಗೂ ಕೃಷಿ ಪದವೀಧರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.