

ವಿಜಯಪುರ: ಇಂದಿನ ಡಿಜಿಟಲ್ ತಂತ್ರಜ್ಞಾನದ ಯುಗದಲ್ಲೂ ಓದುವ ಹವ್ಯಾಸದಿಂದ ದೂರ ಹೋಗುತ್ತಿರುವ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ವೃದ್ಧಿಸುವ ಕೆಲಸವನ್ನು ನಾಡಿನ ನಂ. 1 ದಿನಪತ್ರಿಕೆ ವಿಜಯವಾಣಿ ಮಾಡುತ್ತಿದೆ ಎಂದು ನಗರದ ಶ್ರೀ ರಾಮಕೃಷ್ಣ ವಿದ್ಯಾವಸತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಸಂಯೋಜಕಿ ಶಿವಲೀಲಾ ಪೂಜಾರಿ ಹೇಳಿದರು.
ಶುಕ್ರವಾರ ವಿಜಯವಾಣಿ ಕಚೇರಿಗೆ ವಿಆರ್ಎಲ್ ಸೂಪರ್ ಬಸ್ನಲ್ಲಿ ಆಗಮಿಸಿದ ಶ್ರೀ ರಾಮಕೃಷ್ಣ ವಿದ್ಯಾವಸತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿ ಮಾತನಾಡಿದ ಅವರು, ಜ್ಞಾನ ಎಂದೂ ಕರಗದ ಸಂಪತ್ತು. ಅದನ್ನು ನಾವು ಬಳಸಿದಷ್ಟು ದ್ವಿಗುಣಗೊಳ್ಳುತ್ತದೆ. ಇಂತಹ ಜ್ಞಾನವನ್ನು ಹಂಚುವ ಕೆಲಸವನ್ನು ವಿಜಯವಾಣಿ ಸಮರ್ಥವಾಗಿ ಮಾಡುವ ಮೂಲಕ ಎಲ್ಲಾ ಓದುಗರ ಮನಗೆದ್ದಿದೆ ಎಂದರು.
ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ್ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಶ್ರೇಷ್ಠ. ಸಮಯ ವ್ಯರ್ಥಮಾಡದೆ ನಿತ್ಯ ಹೊಸತನ್ನು ಕಲಿಯುವ ಮೂಲಕ ಆಧುನಿಕ ಪ್ರಪಂಚಕ್ಕೆ ತಕ್ಕಂತೆ ಅಪ್ಡೇಟ್ ಆಗಬೇಕು. ನಿತ್ಯ ಪತ್ರಿಕೆಗಳನ್ನು ಓದುವುದರಿಂದ ದೈನಂದಿನ ವಿದ್ಯಮಾನಗಳ ಅರಿವು ಆಗುತ್ತದಲ್ಲದೇ, ಜ್ಞಾನ ಭಂಡಾರ ವೃದ್ಧಿಯಾಗುತ್ತದೆ ಎಂದರು.
ವಿದ್ಯಾರ್ಥಿಗಳು ಸುದ್ದಿಮನೆಯ ದರ್ಶನವನ್ನು ಮಾಡಿ, ಸುದ್ದಿಗಳ ಸಂಗ್ರಹಣೆ, ಸಂಪಾದನೆ, ಪುಟ ವಿನ್ಯಾಸ, ಜಾಹಿರಾತು, ಪ್ರಸರಣ ವಿಭಾಗಗಳ ಸಂಪೂರ್ಣ ಕಾರ್ಯವಿಧಾನವನ್ನು ಅರಿತುಕೊಂಡರು. ನಂತರ ಅವರನ್ನು ವಿಜಯವಾಣಿ ಮುದ್ರಣ ವಿಭಾಗಕ್ಕೆ ಕರೆದುಕೊಂಡು ಹೋಗಿ ಮುದ್ರಣದ ಹಿಂದಿರುವ ತಾಂತ್ರಿಕ ಟಕದ ದರ್ಶನ ಮಾಡಿಸಲಾಯಿತು.
ಜಾಹೀರಾತು ವ್ಯವಸ್ಥಾಪಕ ಶ್ರೀಧರ್ ಜಾಧವ್, ಮುಖ್ಯ ವರದಿಗಾರ ಪರಶುರಾಮ ಭಾಸಗಿ, ಮುದ್ರಣ ವಿಭಾಗದ ಉಸ್ತುವಾರಿ ಮಂಜುನಾಥ ಬಿ., ಪ್ರಸರಣ ವಿಭಾಗದ ಸಂತೋಷ ಗೋಡಿಕಟ್ಟಿ, ವಿಜಯವಾಣಿ ಸಿಬ್ಬಂದಿ ಇದ್ದರು.