

ಇಂಡಿ: ಜ್ಞಾನದಾಸೋಹಿ ಸಿದ್ದೇಶ್ವರ ಸ್ವಾಮೀಜಿ, ವಿಶ್ವಗುರು ಬಸವಣ್ಣ, ತ್ರಿವಿಧ ದಾಸೋಹಿ ಬಂಥನಾಳದ ಸಂಗನಬಸವ ಸ್ವಾಮೀಜಿ, ವಚನ ಪಿತಾಮಹ .ಗು. ಹಳಕಟ್ಟಿರವರು ಸಂಸ್ಕಾರದಿಂದ ವಿಜಯಪುರ ಜಿಲ್ಲೆಯನ್ನು ಕಟ್ಟಿದ್ದಾರೆ ಆದರೆ, ರಾಜಕಾರಣಿಗಳು ಸಂಸ್ಕಾರ ಮರೆತು ಅವಾಚ್ಯ ಶಬ್ದಗಳ ಬಳಕೆಯಿಂದ ಜಿಲ್ಲೆಗೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ರಾಜಕೀಯ ಹಿತಚಿಂತಕರ ವೇದಿಕೆಯ ಮುಖಂಡ ಅನೀಲಗೌಡ ಬಿರಾದಾರ ಕಳವಳ ವ್ಯಕ್ತಪಡಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಪದ ಜನಪ್ರತಿನಿಧಿಗಳು ಒಂದಾಗಿ ಜಿಲ್ಲೆಯ ಅಭಿವೃದ್ಧಿ ಕಡೆ ಗಮನ ಹರಿಸಬೇಕು. ಆರೋಪ&ಪ್ರತ್ಯಾರೋಪ ಮಾಡುವ ಬದಲು ನೀರಾವರಿ ಕಡೆ ಗಮನ ಹರಿಸಿ ನಮ್ಮ ಜಿಲ್ಲೆ ನೀರಾವರಿ ಮಾಡಿದರೆ, ನಮ್ಮ ಭಾಗದ ಜನರು ದೇವರ ಸ್ಥಾನದಲ್ಲಿ ನಿಮ್ಮನ್ನ್ನು ಪೂಜಿಸುತ್ತಿದ್ದರು ಎಂದರು.
ವಿದ್ವಾಂಸರು, ಸಾಹಿತಿಗಳು, ಹೋರಾಟಗಾರರು, ಈ ಜಿಲ್ಲೆಯನ್ನು ಸರ್ವವಿಧದಲ್ಲಿ ಶ್ರೀಮಂತಗೊಳಿಸಿದ್ದಾರೆ. ಐತಿಹಾಸಕ ಭೌಗೋಳಿಕ, ಆಧ್ಯಾತ್ಮಕವಾಗಿ ಜಿಲ್ಲೆ ನಾಡಿನಲ್ಲಿ ಕೀರ್ತಿ ಪಡೆಯುತ್ತಿದೆ. ನಮ್ಮ ನಾಯಕರು, ನಮ್ಮನ್ನಾಳುವವರ ನಡುವಳಿಕೆಯಿಂದ ಜಿಲ್ಲೆಗೆ ಕೆಟ್ಟ ಹೆಸರು ಬರುವಂತಾಗಿದೆ ಎಂದರು.
ನೆರೆಯ ಕರ್ಲಬುಗಿ&ಯಾದಗಿರಿ ಜಿಲ್ಲೆಯ ಎಲ್ಲ ಪದ ಪ್ರತಿನಿಧಿಗಳು ಒಂದಾಗಿ ಹೋರಾಟ ಮಾಡಿ 371 ಜೆ (ಕಲಂ) ಪಡೆದರು. ಅವರ ಮಕ್ಕಳ ಭವಿಷ್ಯ ರೂಪಿಸಿವಲ್ಲಿ ಯಶಸ್ವಿಯಾದರು, ನಮ್ಮ ಜಿಲ್ಲೆಯ ಜನ ಪ್ರತಿನಿಧಿಗಳು ಯಾವಾಗ ಒಂದಾಗುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಎಲ್ಲರೂ ಒಗಟ್ಟಾಗಿ ಜಿಲ್ಲೆಯ ಅಭಿವೃದ್ಧಿಗೆ ರಾಜಕಾರಣಿಗಳು ಪಣತೊಡಬೇಕು ಎಂದು ಅವರು ಸಲಹೆ ನೀಡಿದರು.
ಬಾಳು ಮುಳಜಿ, ವಿಜಯಕುಮಾರ ರಾಠೋಡ, ಮಹೇಶ ಹೂಗಾರ, ಪ್ರಶಾಂತ ಲಾಳಸಂಗಿ, ಮಂಜುನಾಥ ದೇವರ, ಈರಣಗೌಡ ಪಾಟೀಲ, ಶ್ರೀಕಾಂತ ಬಡಿಗೇರ ಸುದ್ದಿಗೋಷ್ಠಿಯಲ್ಲಿದ್ದರು.