

ವಿಜಯಪುರ: ಸಾಧನೆಗೆ ಬಡತನ ಅಡ್ಡಿಯಾಗದು ಎಂಬುದನ್ನು ಇಲ್ಲೊಬ್ಬ ಯುವಕ ಸಾಧಿಸಿ ತೋರಿಸಿದ್ದಾನೆ. ಬಡತನವಿದ್ದರೂ ಲೆಕ್ಕಿಸಿದೆ ಉತ್ತಮ ಅಭ್ಯಾಸ ಮಾಡುವ ಮೂಲಕ ಬಂಗಾರದ ಪದಕ ಪಡೆದ ಚಿನ್ನದ ಹುಡುಗನ ಕತೆ ಎಲ್ಲ ಬಡ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬಲ್ಲದು. ಛಲವಿದ್ದರೆ ಸಾಕು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಸಿಂದಗಿ ತಾಲೂಕಿನ ತಿಳಗೂಳ ಗ್ರಾಮದ ವಿದ್ಯಾರ್ಥಿ ಕಾರ್ತಿಕ ಮಲಕಪ್ಪ ಚಿಗರಿ ಸಾಬೀತುಪಡಿಸಿದ್ದಾನೆ.
ಕಾರ್ತಿಕ ಚಿಗರಿ ಧಾರವಾಡದ ಕೃಷಿ ವಿಶ್ವವಿದ್ಯಾಯದಲ್ಲಿ ಬಿ.ಎಸ್.ಸಿ ಕೃಷಿ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾನೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ 38ನೇ ಟಿಕೋತ್ಸವದಲ್ಲಿ ಸಾಧಕ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿ ಕಾರ್ತಿಕಗೆ ರಾಜ್ಯಪಾಲ ಥಾವರಚಂದ ಗೆಹಲೋತ್ ಅವರು ನಾಲ್ಕು ಚಿನ್ನದ ಪದಕ ಪ್ರದಾನ ಮಾಡಿದ್ದಾರೆ.
ಕೃಷಿ ವಿಜ್ಞಾನಿಯಾಗಬೇಕೆಂಬ ಅಭಿಲಾಷೆ ಹೊಂದಿರುವ ಕಾರ್ತಿಕ ಗ್ರಾಮೀಣ ಭಾಗದ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕೆನ್ನುವ ಮಹಾದಾಸೆ ಇಟ್ಟುಕೊಂಡಿದ್ದಾನೆ. ವಿವಿಧ ಧಾನ್ಯಗಳ ತಳಿಗಳನ್ನು ಅಭಿವೃದ್ಧಿ ಪಡಿಸುವ ಕನಸು ಕಾಣುತ್ತಿದ್ದಾನೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಕೊಡುವ ಕೃಷಿಯನ್ನು ಅಭಿವೃದ್ಧಿ ಪಡಿಸಿ ಗ್ರಾಮೀಣ ರೈತರ ಬದುಕನ್ನು ಹಸನಾಗಿಸಬೇಕು ಎಂಬ ಹಂಬಲ ಹೊಂದಿದ್ದಾನೆ.
ಕನಸು ಕಂಡು ಸುಮ್ಮನೆ ಕುಳಿತುಕೊಂಡಿಲ್ಲ. ತಾನು ಕಂಡ ಕನಸು ನನಸಾಗಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾನೆ. ಬಡತನವನ್ನು ಮೆಟ್ಟಿನಿಂತು ಸಾಧನೆಯ ಶಿಖರವನ್ನೇರಿದ್ದಾನೆ.