

ಇಂಡಿ: ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ಸರ್ಕಾರದ ಯೋಜನೆಯ ಲಾಭ ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬುದುಕ್ಕೆ ಇಲ್ಲೊಂದು ತಾಜಾ ಉದಾರಣೆ ಇದೆ.
ತಾಲೂಕಿನ ಬಬಲಾದ ಗ್ರಾಮದ ಎ.ಎನ್.ಎಂ.(ಆರೋಗ್ಯ ಮತ್ತು ೇಮ ಕೇಂದ್ರ)ಕ್ಕೆ ಸದಾ ಬೀಗ ಹಾಕಿರುತ್ತದೆ. ಸಾರ್ವಜನಿಕರು ಪ್ರತಿದಿನ ಬಂದು ವಾಪಸ್ ಹೋಗುತ್ತಿದ್ದಾರೆ.
ಬಬಲಾದ ಹಾಗೂ ಹಳಗುಣಕಿ ಗ್ರಾಮಗಳ ಜನರಿಗೆ ಅನುಕೂಲವಾಗಲಿ ಎಂಬ ಸದ್ದುದೇಶದಿಂದ ಸರ್ಕಾರ ಬಬಲಾದ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ಸುಸಜ್ಜಿತ ಕಟ್ಟಡ ಕಟ್ಟಿದ್ದು, ಅಲ್ಲಿ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದಂತಾಗಿದೆ. ಆರೋಗ್ಯ ತಪಾಸಣೆಗಾಗಿ ಇಂಡಿ ಹಾಗೂ ವಿಜಯಪುರಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದಿದೆ.
ಸಿಬ್ಬಂದಿಗೆ ಕರೆ ಮಾಡಿದರೆ ಮಿಟಿಂಗ್ ಇದೆ, ಬೇರೆ ಕಡೆ ಇದ್ದೇವೆ, ನಾಳೆ ಬರುತ್ತೇವೆ ಎಂಬ ಸಬೂಬು ಹೇಳುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಿಬ್ಬಂದಿ ಬರದೇ ಇರುವುದರಿಂದ ಅಲ್ಲಿನ ಜನರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.