38ನೇ ಶರಣ ಮೇಳಕ್ಕೆ ವೇದಿಕೆ ಸಿದ್ಧ

The stage is set for the 38th Sharan Mela.
 ವಿದ್ಯುತ್ ದೀಪಗಳಿಂದ ಶೃಂಗಾರಗೊಂಡ ಶರಣ ಲೋಕ.
Published on

ಕೂಡಲಸಂಗಮ: ಇಲ್ಲಿನ ಬಸವ ಧರ್ಮ ಪೀಠದ ಆವರಣದಲ್ಲಿ ಜ.12ರಿಂದ 14ರವರೆಗೆ ಜರುಗಲಿರುವ 38ನೇ ಶರಣ ಮೇಳಕ್ಕೆ ವೇದಿಕೆ ಸಿದ್ಧಗೊಂಡಿದ್ದು ಶನಿವಾರ ಬೆಳಗ್ಗೆಯಿಂದಲೇ ಭಕ್ತರು ಆಗಮಿಸುತ್ತಿದ್ದಾರೆ.

ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಸುದ್ದಿಗಾರರೊಂದಿಗೆ ಮಾತನಾಡಿ, ಭಕ್ತರಿಗೆ ಬಸವ ಧರ್ಮ ಪೀಠದ ಆವರಣದ ವಿವಿಧ ಶರಣ ಧಾಮಗಳಲ್ಲಿ 400 ಕೊಠಡಿಗಳು, 200 ತಾತ್ಕಾಲಿಕ ವಸತಿ ಟೆಂಟ್‌ಗಳನ್ನು ನಿರ್ಮಿಸಿದೆ. 4 ಎಕರೆ ಪ್ರದೇಶದಲ್ಲಿ 200/400 ಅಡಿ ಉದ್ದದ ವೇದಿಕೆ, 4 ಎಕರೆ ಪ್ರದೇಶದಲ್ಲಿ 200/200 ಅಡಿ ಉದ್ದದ ಊಟದ ಮನೆ, 6 ಎಕರೆ ಪ್ರದೇಶದಲ್ಲಿ ತಾತ್ಕಾಲಿಕ ವಸತಿ ಟೆಂಟ್ ನಿರ್ಮಿಸಲಾಗಿದೆ. 20 ಸಾವಿರ ಜನ ಕುರ್ಚಿ ಮೆಲೆ ಕುಳಿತು ಹಾಗೂ 1 ಲಕ್ಷ ಜನ ನೆಲದ ಮೇಲೆ ಕುಳಿತು ಕಾರ್ಯಕ್ರಮ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.

ಉತ್ತರ ಕರ್ನಾಟಕದ ಬಿಳಿ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಲಾಡು, ಹುಗ್ಗಿ, ಸಾವಗಿ ಪಾಯಸ, ಕುಂಬಳಕಾಯಿ ಪಾಯಸ ಮುಂತಾದ ಸಿಹಿತಿಂಡಿಗಳ ಜತೆಗೆ ಮೊಸರು, ಮಜ್ಜಿಗೆ ನೀಡಲಾಗುವುದು. 50 ಬಾಣಸಿಗರು, 200 ಜನ ಸಹಾಯಕರು ಅಡುಗೆ ತಯಾರಿಯಲ್ಲಿ ತೊಡಗಿದ್ದು 5 ಸಾವಿರ ರಾಷ್ಟ್ರೀಯ ಬಸವ ಬಸವ ದಳದ ಕಾರ್ಯಕರ್ತರು ಪ್ರಸಾದ ಬಡಿಸಲು ಪಾಳಿಪದ್ಧತಿಯಲ್ಲಿ ನಿಯೋಜನೆ ಮಾಡಲಾಗಿದೆ.

ಭಕ್ತರಿಗೆ ಬಾಗಲಕೋಟೆ, ಇಲಕಲ್ಲ, ಹುನಗುಂದ, ವಿಜಯಪೂರ ರಸ್ತೆ ಸಾರಿಗೆ ಘಟಕದವರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿದೆ.

ಶರಣ ಮೇಳದ ಅಂಗವಾಗಿ ಬಸವ ಧರ್ಮ ಪೀಠದ ಶರಣ ಲೋಕ, ಮಹಾಮನೆ, ಮಡಿವಾಳ ಮಾಚಿದೇವ ಮಹಾದ್ವಾರವನ್ನು ಬಣ್ಣದ ವಿದ್ಯುತ್ ದ್ವೀಪಗಳಿಂದ ಅಲಂಕರಿಸಿದ್ದು, ಭಕ್ತರನ್ನು ಆಕರ್ಶಿಸುತ್ತಿದೆ.

ಶರಣ ಮೇಳದ ಮೊದಲನೆ ದಿನ ರಾಷ್ಟ್ರೀಯ ಬಸವ ದಳದ 34ನೇ ಅಧಿವೇಶನ

ಶರಣ ಮೇಳದ ಮೊದಲನೆಯ ದಿನವಾದ ಜ.12ರಂದು ಬೆಳಗ್ಗೆ 10:30ಕ್ಕೆ ರಾಷ್ಟ್ರೀಯ ಬಸವ ದಳದ 34ನೇ ಅಧಿವೇಶನ ನಡೆಯುವುದು. ಉದ್ಘಾಟನೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇರವೆರಿಸಲಿದ್ದು, ಇಲಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ, ತಂಗಡಗಿ ಹಡಪದ ಅಪ್ಪಣ್ಣ ದೇವರ ಸಂಸ್ಥಾನಮಠದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಜೆ 6 ಗಂಟೆಗೆ ಮಹಿಳಾ ಗೋಷ್ಠಿ ಆಯೋಜಿಸಲಾಗಿದ್ದು, ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಉದ್ಘಾಟಿಸುವರು. ಬಸವಕಲ್ಯಾಣ ಅಖಿಲ ಭಾರತ ಹರಳಯ್ಯ ಪೀಠದ ಡಾ.ಅಕ್ಕ ಗಂಗಾಂಬಿಕೆ ಸಾನ್ನಿಧ್ಯ ವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net