

ಹುನಗುಂದ: ಬೀದರ್ ಹಾಗೂ ಮಂಗಳೂರಿನಲ್ಲಿ ನಡೆದಿರುವ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಪಟ್ಟಣದ ಬ್ಯಾಂಕ್ ಮ್ಯಾನೇಜರ್ ಮತ್ತು ಆಭರಣದ ಅಂಗಡಿ ಮಾಲೀಕರು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪಿಎಸ್‌ಐ ಪ್ರಕಾಶ ಡಿ. ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಪಟ್ಟಣದ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು ಮತ್ತು ಜ್ಯೂವೆಲ್ಲರಿ ಅಂಗಡಿ ಮಾಲೀಕರ ಜಾಗೃತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕ್ ಹಾಗೂ ಆಭರಣದ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ, ಭದ್ರತಾ ಸಿಬ್ಬಂದಿ, ಅಲಾರಾಂ ಅಳವಡಿಸಬೇಕು ಹಾಗೂ ಎಟಿಎಂ ಮುಂದೆ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಬೇಕು. ಬ್ಯಾಂಕ್ ಉದ್ಯೋಗಿಗಳು, ಭದ್ರತಾ ಸಿಬ್ಬಂದಿ ಎಚ್ಚರಿಕೆಯಿಂದ ಇದ್ದು, ತುರ್ತು ಸಂದರ್ಭಗಳಲ್ಲಿ ಸಮೀಪದ ಠಾಣೆಗೆ ಸಂಪರ್ಕಿಸುವಂತೆ ತಿಳಿಸಿದರು.
ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಆನಂದ ಕುಲಕರ್ಣಿ ಮಾತನಾಡಿ, ಪೊಲೀಸರ ರಕ್ಷಣೆಯಿಂದಲೇ ಬ್ಯಾಂಕ್‌ಗಳು ಸುರಕ್ಷಿತವಾಗಿವೆ. ಎಲ್ಲರೂ ಬ್ಯಾಂಕಿನಲ್ಲಿ ಜಾಗೃತರಾಗಿ ಕಾರ್ಯನಿರ್ವಹಿಸಬೇಕು ಎಂದರು.
ಶರಣು ಚಳಗೇರಿ, ಭರಮಣ್ಣ ರಾಮವಾಡಗಿ, ಮಂಜುನಾಥ ಸಿರಗುಪ್ಪಿ, ರಾಜು ಭಯ್ಯಪುರ, ಶರಣು ಕಂಠಿ, ಜ್ಯೂವೆಲ್ಲರಿ ಸಂಘದ ಅಧ್ಯಕ್ಷ ಮನೋಹರ ಪತ್ತಾರ, ನಾಗರಾಜ ರೇವಣಕರ ಮತ್ತಿತರರಿದ್ದರು.