ಕಿಸಗಾಲುಗೊಂಬೆಗೆ ಭರ್ಜರಿ ಡಿಮಾಂಡ್

Huge demand for puppets
ಸಗಣಿಯಿಂದ ಮಾಡಿದ ಕಿಸಗಾಲುಗೊಂಬೆಗಳು
Published on

ಬಸವರಾಜ ಸಿಂದಗಿಮಠ, ಗುಳೇದಗುಡ್ಡ

ಬಾದಾಮಿಯ ಬನಶಂಕರಿಜಾತ್ರೆಯ ರಥೋತ್ಸವದ ನಂತರ ಅತಿಹೆಚ್ಚು ಮಾರಾಟವಾಗುವ ಕಿಸಗಾಲು ಗೊಂಬೆಗಳಿಗೆ ತನ್ನದೇ ಆದ ಇತಿಹಾಸವಿದೆ. ಈ ಗೊಂಬೆಗಳನ್ನು ಸಗಣಿ, ದಂಟು, ಹುಣಸೆ ಬೀಜಗಳಿಂದ ತಯಾರಿಸಲಾಗುತ್ತದೆ. ಗುಳೇದಗುಡ್ಡ ಸಮೀಪದ ಕೋಟೆಕಲ್ಲನಲ್ಲಿ ಮಲ್ಲಪ್ಪ ಚಿತ್ರಗಾರ ಮನೆತನದವರು ತಲೆತಲಾಂತರಿಂದ ಈ ಕಿಸಗಾಲು ಗೊಂಬೆ ತಯಾರಿಸುವಲ್ಲಿ ಪರಿಣಿತಿ ಹೊಂದಿದ್ದಾರೆ.

ಅತಿಹೆಚ್ಚು ಶ್ರಮಬಯಸುವ ಈ ಕಾಯಕದಲ್ಲಿ ಆದಾಯ ಮಾತ್ರ ಕಡಿಮೆ. ಆದರೂ ಇದು ಮನೆತನದ ಉದ್ಯೋಗ ಎಂದು ಮುಂದುವರಿಸಿದ್ದೇವೆ. ಪ್ರತಿವರ್ಷ ಬನಶಂಕರಿ ದೇವಿಯ ರಥೋತ್ಸವ ಮುಗಿದ ನಂತರ ಗೊಂಬೆಗಳು ಮಾರಾಟವಾಗುತ್ತವೆ. ಈ ಗೊಂಬೆಗಳನ್ನು ಪೂಜಿಸಿದರೆ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ಹೀಗಾಗಿ, ಗ್ರಾಮೀಣ ಭಾಗದ ಜನರು ಅದರಲ್ಲೂ ರಬಕವಿ ಬನಹಟ್ಟಿ ಭಾಗದ ಜನರು ಪಳಾರದ ಜತೆಗೆ ಈ ಗೊಂಬೆಗಳನ್ನು ಅಧಿಕವಾಗಿ ಮಾರಾಟವಾಗುತ್ತವೆ ಎನ್ನುತ್ತಾರೆ ಮಲ್ಲಪ್ಪ ಚಿತ್ರಗಾರ.

ಇವರಂತೆ ಕೊಪ್ಪಳ ಜಿಲ್ಲೆಯ ಕಿನ್ನಾಳ, ಕುದರಿಮೋತಿ ಭಾಗದ ಮತ್ತಿತರ ಮಾರಾಟಗಾರರು ಬನಶಂಕರಿ ಜಾತ್ರೆಯಲ್ಲಿ ಕಿಸಗಾಲು ಗೊಂಬೆಗಳನ್ನು ಮಾರಾಟ ಮಾಡುತ್ತಾರೆ. ಒಟ್ಟಾರೆ ಹತ್ತರಿಂದ ಹದಿನೈದು ಸಾವಿರ ಗೊಂಬೆಗಳು ಜಾತ್ರೆಯ ದಿನ ಮಾರಾಟವಾಗುವುದು ಇಲ್ಲಿನ ವಿಶೇಷವಾಗಿದೆ. ಈ ಗೊಂಬೆ ತಯಾರಿಸುವ ಅನೇಕ ಕುಟುಂಬಗಳು ಬನಶಂಕರಿ ಜಾತ್ರೆಯನ್ನೇ ನಂಬಿ ಕಿಸಗಾಲುಗೊಂಬೆಗಳನ್ನು ತಯಾರಿಸುವ ಕೆಲಸ ಮಾಡುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net