

ಲೋಕಾಪುರ : ವಿಜಯಪುರ ಹೊರವಲಯದ ಇಟ್ಟಿಗೆ ಬಟ್ಟಿಯಲ್ಲಿ ಕಾರ್ಮಿಕರ ಮೇಲಿನ ಹಲ್ಲೆ ಖಂಡಿಸಿ, ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಅಹಿಂದ ಒಕ್ಕೂಟ ಮುಖಂಡರು ಆಗ್ರಹಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಸಮಾಜದ ಮುಖಂಡ ಹಾಗೂ ಜಿಲ್ಲಾ ಮಟ್ಟದ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ನಾಮ ನಿರ್ದೇಶಿತ ಸದಸ್ಯ ಗೋವಿಂದಪ್ಪ ಕೌಲಗಿ ಮಾತನಾಡಿ, ವಿಜಯಪುರ ಜಿಲ್ಲೆಯ ಗಾಂಧಿನಗರ ಬಳಿ ಇರುವ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ ಮಾದರ ಅವರು ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗಿ ವಾಪಸ್ ಬರುವುದು ವಿಳಂಬವಾದ ಹಿನ್ನೆಲೆಯಲ್ಲಿ ಮಾಲೀಕ ಅವರ ಕಾಲುಗಳನ್ನು ಕಟ್ಟಿಹಾಕಿ ಪೈಪ್‌ನಿಂದ ಹಲ್ಲೆ ಮಾಡಿದ್ದಾನೆ. ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದರು.
ದಲಿತ ಮುಖಂಡ ಮಹೇಶ ಹುಗ್ಗಿ ಮಾತನಾಡಿ, ಅಮಾಯಕ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿರುವ ಇಟ್ಟಂಗಿ ಬಟ್ಟಿ ಮಾಲೀಕನನ್ನು ಗಡಿಪಾರು ಮಾಡಿ, ಅವನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹಲ್ಲೆಗೊಳಗಾದ ದಲಿತ ಕಾರ್ಮಿಕರಿಗೆ ಸೂಕ್ತ ಚಿಕಿತ್ಸೆ ನೀಡಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದರು.
ಯುವ ಮುಖಂಡ ಕುಮಾರ ಕಾಳಮ್ಮನವರ ಮಾತನಾಡಿ, ಹಲ್ಲೆ ನಡೆಸಿದವರು ಯಾವುದೇ ಧರ್ಮ, ಜಾತಿಗೆ ಸೇರಿದರೂ ಕೂಡ ಅವರು ಮಾಡಿರುವ ಕೃತ್ಯ ಖಂಡನೀಯ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಹಾಗೂ ನೊಂದ ಕಾರ್ಮಿಕರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಶಂಕೆಪ್ಪ ಪೂಜಾರಿ, ಭೀಮನಗೌಡ ಪಾಟೀಲ, ಗೋವಿಂದಪ್ಪ ಕೌಲಗಿ, ಮಹೇಶ ಹುಗ್ಗಿ, ರವಿ ರೊಡ್ಡಪ್ಪನವರ, ಕುಮಾರ ಕಾಳಮ್ಮನವರ, ಹಣಮಂತ ದುರ್ಗನ್ನವರ, ಅಶೋಕ ದೊಡಮನಿ, ಸುರೇಶ ಪೂಜಾರಿ, ರಂಗನಾಥ ಚಿಪ್ಪಲಕಟ್ಟಿ, ಗೋಪಾಲ ಲಮಾಣಿ, ಮಹೇಶ ಪೂಜಾರಿ, ಅಬ್ದುಲ್‌ರೆಹಮಾನ್ ತೊರಗಲ್, ಸಂಜು ಬೀದರಿಮತ್ತಿತರರಿದ್ದರು.