

ತಾಳಿಕೋಟೆ: ಡೋಹರ, ಮಚಗಾರ, ಸಮಗಾರ ಸಮುದಾಯಗಳು ಚರ್ಮ ಹದ ಮಾಡುವ, ಚರ್ಮದ ಉತ್ಪನ್ನಗಳನ್ನು ತಯಾರಿಸುತ್ತ ಬದುಕು ಸಾಗಿಸುತ್ತಿದ್ದಾರೆ. ಚರ್ಮ ಹದ ಮಾಡುವ ಸಮಾಜಗಳನ್ನು ಪುನಃ ಚರ್ಮಕಾರರ ಗುಂಪಿಗೆ ಸೇರಿಸಬೇಕೆಂದು ಒತ್ತಾಯಿಸಿ ತ್ರಿಮತಸ್ಥ ಶ್ರೀ ಗುರು ರವಿದಾಸ ಪರಿಷತ್ ಹಾಗೂ ತಾಳಿಕೋಟೆ ವಚನ ರಕ್ಷಕ ಡೋಹರ ಕಕ್ಕಯ್ಯ ಸಮಾಜದ ವತಿಯಿಂದ ತಹಸೀಲ್ದಾರ್ ಕೀರ್ತಿ ಚಾಲಕ ಅವರಿಗೆ ಮನವಿ ಸಲ್ಲಿಸಲಾಯಿತು.
ಡೋಹರ ಸಮಾಜದ ಗೌರವಾಧ್ಯಕ್ಷ ಸುಭಾಸ ಹೋಟಗಾರ ಮಾತನಾಡಿ, ನಮ್ಮ ಸಮಾಜ ತಲೆಮಾರುಗಳಿಂದ ಜೀವನೋಪಾಯಕ್ಕಾಗಿ ಚರ್ಮ ಹದಮಾಡುವ ವೃತ್ತಿ ಅವಲಂಬಿಸಿಕೊಂಡು ಬಂದಿದೆ. ಆದರೆ, ಮಾಧುಸ್ವಾಮಿ ವರದಿಯಂತೆ ಡೋಹರ ಸಮಾಜವನ್ನು ಚರ್ಮಕಾರರಿಂದ ಬೇರ್ಪಡಿಸಿ ಅಲೆಮಾರಿ ಗುಂಪಿಗೆ ಸೇರಿಸಿರುವುದು ಅವೈಜ್ಞಾನಿಕವಾಗಿದೆ. ಪುನಃ ಚರ್ಮಕಾರರ ಗುಂಪಿಗೆ ಸೇರಿಸುವ ಮೂಲಕ ಚರ್ಮಕಾರರ 18 ಜಾತಿಗಳನ್ನು ಗುಂಪು ಮಾಡಬೇಕು. ಮಾದಿಗ ಸಮಾಜದಿಂದ ಬೇರ್ಪಡಿಸುವ ಮೂಲಕ ಸಾಮಾಜಿಕ, ಆರ್ಥಿಕ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಒಳಮೀಸಲಾತಿಗೆ ಅನುಗುಣವಾಗಿ ಪ್ರತ್ಯೇಕ ಮೀಸಲಾತಿ ಘೋಷಿಸಬೇಕು. ತ್ರಿಮತಸ್ಥ ಚರ್ಮಕಾರರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದರು.
ಡೋಹರ ಸಮಾಜದ ಅಧ್ಯಕ್ಷ ಪರಶುರಾಮ ಹೋಟಗಾರ, ಖಜಾಂಚಿ ವಿಜಯಕುಮಾರ ಹೋಟಗಾರ, ಸದಸ್ಯರಾದ ಯಲ್ಲಪ್ಪ ಹೋಟಗಾರ, ಮಲ್ಲಿಕಾರ್ಜುನ ಹೋಟಗಾರ, ಆನಂದ ಹೋಟಗಾರ, ಮೋಹನ್ ಹೋಟಗಾರ, ಸಾಗರ ಹೋಟಗಾರ ಇದ್ದರು.