ಜಿ.ಟಿ. ದೇವೇಗೌಡ ಸ್ಲೋ ಪಾಯಿಸನ್ ಹಾಕಿ ಪಕ್ಷವನ್ನು ಮುಗಿಸಿ ಬಿಡುತ್ತಾರೆ : ಎಚ್.ಡಿ. ಕುಮಾರಸ್ವಾಮಿ ಕಳವಳ

hdkumaraswamy-1613458111
Published on

ಮೈಸೂರು: ಶಾಸಕ ಜಿ.ಟಿ. ದೇವೇಗೌಡ ಸ್ಲೋ ಪಾಯಿಸನ್ ಹಾಕಿ ಪಕ್ಷವನ್ನು ಮುಗಿಸಿ ಬಿಡುವ ಆತಂಕ ಇರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಅವ ರೊಂದಿಗೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿ.ಟಿ. ದೇವೇಗೌಡರ ವಿಚಾರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಗಮನಕ್ಕೂ ತರುತ್ತೇನೆ. ಜಿ.ಟಿ. ದೇವೇಗೌಡರ ಕುರಿತು ಮೃದು ಧೋರಣೆ ತಳೆದರೆ ನಿಷ್ಟಾಂತ ಕಾರ್ಯಕರ್ತರನ್ನು ಕಳೆದುಕೊಳ್ಳಬೇಕಾಗುತ್ತದೆ. ಸ್ಲೋ ಪಾಯಿಸನ್ ಹಾಕಿ ಮುಂದೆ ಅಭ್ಯರ್ಥಿಗಳನ್ನು ಹಾಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡುತ್ತಾರೆ. ಈಗಾಗಲೇ ಅವರು ಪಕ್ಷದಿಂದ ದೂರವಾಗಿದ್ದಾರೆ. ಮುಂದೆ ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಪ್ರಶ್ನೆಯೇ ಇಲ್ಲ ಎಂದರು.

ಶಾಸಕ ಸಾ.ರಾ. ಮಹೇಶ್ ಅವರೊಂದಿಗೆ ಮುನಿಸಿಕೊಂಡು ಅವರು ಪಕ್ಷದಿಂದ ದೂರವಾಗಿದ್ದಾರೆ. ಆದರೆ, ಸಾ.ರಾ. ಮಹೇಶ್ ಏನು ಮಾಡಿದ್ದಾರೋ ತಿಳಿಯದು. ನಾನು ಸಾ.ರಾ. ಮಹೇಶ್ ಮಾತನ್ನು ಮಾತ್ರ ಕೇಳುತ್ತೇನೆ ಅನ್ನೋದು ಕೂಡ ತಪ್ಪು. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸಾಕಷ್ಟು ಸಂಖ್ಯೆಯಲ್ಲಿ ಜನರು ಅರ್ಜಿ ಹಿಡಿದು ವಿಧಾನಸೌಧಕ್ಕೆ ಬರುತ್ತಿದ್ದರು. ಆದರೆ, ಇಂದು ಎಷ್ಟು ಜನರನ್ನು ಒಳಗೆ ಬಿಟ್ಟುಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು.

2006ರ ಚಾಮುಂಡೇಶ್ವರಿ ವಿಧಾನಸಭಾ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಸೋಲು ಅನುಭವಿಸಲು ಜಿ.ಟಿ. ದೇವೇಗೌಡ ಕಾರಣ. ಚುನಾವಣೆಯ ಮುನ್ನಾ ದಿನ ನನಗೆ ಜ್ವರ ಕಾಣಿಸಿಕೊಂಡು ವಿಶ್ರಾಂತಿ ಪಡೆದೆ. ಅದೇ ಸಂದರ್ಭ ಜಿ.ಟಿ. ದೇವೇಗೌಡ ನನಗೆ ಚುನಾವಣೆಯ ಆರ್ಥಿಕ ಉಸ್ತುವಾರಿ ನೀಡಲಿಲ್ಲ ಎಂದು ಚುನಾವಣೆಯಿಂದ ದೂರ ಉಳಿದುಕೊಂಡರು. ಹೀಗಾಗಿ ನಾವು ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು. ಅಂದೇ ನಾವು ಅವರನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತು ಎಂದು ಹೇಳಿದರು.

ಜಿ.ಟಿ. ದೇವೇಗೌಡರು ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ನಮಗೆ ಬೆಳೆದವರು ಬೇಡ, ಸಣ್ಣವರು ಸಾಕು. ಇಂಥವರನ್ನು ಪಕ್ಷದಿಂದ ದೂರ ಇಡುವುದು ಉತ್ತಮ. ನನ್ನ ರಾಜಕೀಯ ಜೀವನದಲ್ಲಿ ಬಹಳಷ್ಟು ಅನುಭವ ಆಗಿದೆ. ನಾನು ಎಲ್ಲರನ್ನು ಸಹೋದರ ಮನೋಭಾವದಿಂದ ಹೃದಯದಲ್ಲಿ ಎಲ್ಲರಿಗೂ ಸ್ಥಾನ ನೀಡುತ್ತೇನೆ. ಅವರ ಎಲ್ಲ ಕಷ್ಟಸುಖದಲ್ಲಿ ಭಾಗಿಯಾಗುತ್ತೇನೆ. ನಾನು ಭಾವನಾತ್ಮಕವಾಗಿ ಎಲ್ಲರೊಂದಿಗೆ ಬೆರೆಯುತ್ತೇನೆ. 2013 ರಿಂದ 2018ರ ಅವಧಿಯಲ್ಲಿ ಏಳೆಂಟು ಜನ ಶಾಸಕರು ಬಿಟ್ಟು ಹೋದರು. ಯಾರನ್ನು ನಾನು ವಾಪಾಸ್ ಕರೆದಿಲ್ಲ. ಅದೇ ರೀತಿ ಜಿ.ಟಿ. ದೇವೇಗೌಡರನ್ನು ಸಹ ಆಹ್ವಾನಿಸುವ ಪ್ರಶ್ನೆಯೇ ಇಲ್ಲ. ಒಡಹುಟ್ಟಿದವರಿಗಿಂತ ಚೆನ್ನಾಗಿದ್ದವರು ಸಹ ಬಿಟ್ಟು ಹೋಗಿದ್ದಾರೆ. ಅವರನ್ನು ವಾಪಾಸ್ ಕರೆಯಿಸಿಕೊಂಡಿಲ್ಲ. ಅದೇ ರೀತಿ ನಾನು ಜೆಡಿಎಸ್‌ನಲ್ಲಿ ಇರುವವರೆಗೆ ಜಿ.ಟಿ. ದೇವೇಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net