

ಮೈಸೂರು: ಶಾಸಕ ಎಸ್.ಎ. ರಾಮದಾಸ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಶಾಸಕ ರಾಮದಾಸ್ ಅವರೊಂದಿಗೆ ಬುಧವಾರ ಬೆಳಗ್ಗೆ ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಂಡವರಿಗೆ ಇದೀಗ ಆತಂಕ ಪ್ರಾರಂಭವಾಗಿದೆ.
ಎರಡು ದಿನಗಳ ಹಿಂದೆ ರಾಮದಾಸ್ ಅವರಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ಸ್ವಾೃಬ್ ಟೆಸ್ಟ್ ಮಾಡಿಸಿ ಕೊಂಡಿದ್ದರು. ಬುಧವಾರ ಬೆಳಗ್ಗೆ ಕೋವಿಡ್ ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಆದರೆ, ಈ ವಿಚಾರ ತಿಳಿಯದ ರಾಮದಾಸ್ ಜಿಲ್ಲಾಡಳಿತ ನಗರದ ಪುರಭವನ ಆವರಣದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಎಲ್. ನಾಗೇಂದ್ರ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಧರ್ಮಸೇನ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೇಯರ್ ರುಕ್ಮಿಣಿ ಮಾದೇಗೌಡ, ಮಾಜಿ ಸಚಿವ ಎಂ. ಶಿವಣ್ಣ ಹಾಗೂ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು. ಇದೀಗ ಎಲ್ಲರಿಗೂ ಆತಂಕ ಪ್ರಾರಂಭವಾಗಿದೆ.
ಸೋಂಕಿನ ಲಕ್ಷಣವಿದ್ದರೂ ಭಾಗಿ: ರಾಮದಾಸ್ ಅವರಿಗೆ ಸೋಂಕಿನ ಲಕ್ಷಣ ಕಂಡು ಬಂದು ಕೋವಿಡ್ ಟೆಸ್ಟ್ ಮಾಡಿಸಿಕೊಂಡರೂ ಸಹ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಅವರು ಕೋವಿಡ್ ವರದಿ ಬಂದ ನಂತರ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಆದರೆ, ವರದಿ ಬರುವ ಮುನ್ನವೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇದೀಗ ಎಲ್ಲರ ಆತಂಕಕ್ಕೆ ಕಾರಣರಾಗಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಎಲ್ಲರಿಗೂ ಟೆಸ್ಟ್: ರಾಮದಾಸ್ ಅವರಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವವರು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಹಲವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವ ಅನಿವಾರ್ಯತೆ ನಿರ್ಮಾಣವಾಗಿದೆ.