ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ನಾನು ಹಣ ಪಡೆದಿರುವುದನ್ನು ಸಿದ್ದರಾಮಯ್ಯ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ: ಜಿ.ಟಿ. ದೇವೇಗೌಡ ಸವಾಲು

gt-devegowda-1528520062
Published on

ಮೈಸೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್‌ನಿಂದ ಹಣ ಪಡೆದು ಬಿಜೆಪಿ ಪರವಾಗಿ ಕೆಲಸ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಆರೋಪವನ್ನು ಅವರು ಸಾಬೀತು ಪಡಿಸಿದರೆ ನಾನು ರಾಜಕೀಯ ಜೀವನದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ಸವಾಲು ಹಾಕಿದ್ದಾರೆ.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಜಿ.ಟಿ. ದೇವೇಗೌಡ ಏನು ಎಂಬುದು 25 ವರ್ಷಗಳಿಂದ ಗೊತ್ತಿದೆ. ನಾನು ನನ್ನ ರಾಜಕೀಯ ಜೀವನದಲ್ಲಿ ವರ್ಗಾವಣೆ, ಕಾಮಗಾರಿ ಸೇರಿದಂತೆ ಯಾವುದೇ ರೂಪದಲ್ಲಿ ಹಣ ಪಡೆದಿಲ್ಲ. ಹಣ ಪಡೆದಿರುವುದನ್ನು ಸಾಬೀತು ಪಡಿಸಿದರೆ ಆ ಕ್ಷಣದಲ್ಲಿ ನಾನು ರಾಜಕಾರಣದಲ್ಲಿ ಇರುವುದಿಲ್ಲ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದೆ. ನಮ್ಮ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಹೇಳಿದ್ದರು. ಬೂತ್ ಖರ್ಚುವೆಚ್ಚಕ್ಕೆ ಶಾಶಕ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ನಮ್ಮ ಪಕ್ಷದ ರಾಜು ಕಾರ್ಯಕರ್ತರಿಗೆ ಹಣ ಹಂಚಿಕೆ ಮಾಡಿದರು. ಆದರೆ, ನಾನು ಎಲ್ಲೂ ಕೂಡ ಹಣಕಾಸಿನ ವ್ಯವಹಾರ ಮಾಡಿಲ್ಲ. ನಾನು ವೈಯಕ್ತಿಕವಾಗಿ ಹಣ ಪಡೆದಿಲ್ಲ, ನೀಡಿಯೂ ಇಲ್ಲ. ಅತ್ಯಂತ ಸ್ಪಷ್ಟವಾಗಿ, ಆತ್ಮಸಾಕ್ಷಿಗೆ ಅನುಗುಣವಾಗಿ ಈ ಮಾತು ಹೇಳುತ್ತಿದ್ದೇನೆ. ಹೀಗಾಗಿ ಸಿದ್ದರಾಮಯ್ಯ ತಮ್ಮ ಹೇಳಿಕೆಗೆ ವಿವರಣೆ ನೀಡಬೇಕು ಎಂದು ಆಗ್ರಹಿಸಿದರು.

ಮೈಸೂರು, ಮಂಡ್ಯ ಮತ್ತು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‌ಗೆ ಉಂಟಾದ ಸೋಲು ನಂತರ ಹಲವು ಅನುಮಾನಗಳಿಗೆ ಕಾರಣವಾಯಿತು. ಆ ಚುನಾವಣೆಯಲ್ಲಿ ಜನರೇ ಅಭ್ಯರ್ಥಿಗಳನ್ನು ಸೋಲಿಸಿದರು. ಹಣವಾಗಲಿ, ಮುಖಂಡ ರಾಗಲಿ ಚುನಾವಣೆ ಮೇಲೆ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ರಾಜ್ಯಮಟ್ಟದಲ್ಲಿ ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆಯಾದರೂ ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಆಗಲಿಲ್ಲ. ದಿಢೀರ್ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಅದು ಫಲ ನೀಡಲಿಲ್ಲ. ಮೋದಿ ಹವಾದಿಂದ ಬಿಜೆಪಿಯವರು ಗೆಲುವು ಸಾಧಿಸಿದರು. ಮೋದಿಯ ಹುಚ್ಚುಹೊಳೆಯಿಂದ ಗೆಲ್ಲಲಾಗದವರು ಸಹ ಗೆದ್ದರು, ಗೆಲ್ಲುವ ಸಾಧ್ಯತೆ ಇದ್ದವರು ಸಹ ಸೋತರು. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ನನ್ನ ರಾಜಕೀಯ ಜೀವನದಲ್ಲಿ ಎಂದೂ ನಾನು ಹಣ ಪಡೆದಿಲ್ಲ, ಅದೇ ರೀತಿ ಸಿದ್ದರಾಮಯ್ಯ ಕೂಡ ಹಣ ಪಡೆದಿಲ್ಲ. ಯಾವ ಕಾರಣಕ್ಕೆ ಅವರು ನನ್ನ ಮೇಲೆ ಆರೋಪ ಹೊರಿಸಿದ್ದಾರೋ ಗೊತ್ತಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net