

ಮೈಸೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣದ ಹೆಣ್ಣು ಮಗಳಿಗೆ ಯಾರಿಂದ ರಕ್ಷಣೆ ಸಿಗಬೇಕಿದೆಯೋ, ಅವರಿಂದ ಸಿಕ್ಕಿದೆ. ಸರ್ಕಾರಕ್ಕೆ ಆ ಯುವತಿ ಟ್ರೇಸ್ ಆಗದೇ ಇದ್ದರೂ, ಆ ಯುವತಿಗೆ ಸಿಗಬೇಕಾದ ರಕ್ಷಣೆ ಕೆಲವರಿಂದ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಒಳಗಿನವರೋ, ಸರ್ಕಾರದ ವಿರುದ್ದ ಇರುವವರೋ ಯಾರೋ ಆ ಯುವತಿಗೆ ಈಗಾಗಲೇ ರಕ್ಷಣೆ ಕೊಟ್ಟಿದ್ದಾರೆ. ಯಾರೋ ವಿಡಿಯೋ ವನ್ನು ರೆಕಾರ್ಡ್ ಮಾಡಿ ಕಳಿಸಿದ್ದಾರೆ. ಸರ್ಕಾರದ ಒಳಗೆ ಇದ್ದವರೇ ಆ ಯುವತಿಗೆ ರಕ್ಷಣೆ ಕೊಟ್ಟು ಇಟ್ಟು ಕೊಂಡಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.
ಈ ಮನುಷ್ಯನ ಸ್ಪೀಡ್ ಗೆ ಬ್ರೇಕ್ ಹಾಕಲು ಸರ್ಕಾರದ ಒಳಗೆ ಇದ್ದವರೇ ಆ ಯುವತಿಗೆ ರಕ್ಷಣೆ ಕೊಡುತ್ತಿದ್ದಾರೋ ಗೊತ್ತಿಲ್ಲ.ಒಟ್ಟಿನಲ್ಲಿ ಆ ಯುವತಿಗೆ ಯಾರೋ ಕೆಲವರಿಂದ ರಕ್ಷಣೆಯಂತೂ ಇದ್ದೇ ಇದೆ. ಡಿ ಕೆ ಶಿವಕುಮಾರ್ ಹೆಸರು ಈ ಪ್ರಕರಣದಲ್ಲಿ ಯಾರಾದರೂ ಹೇಳಿದ್ರಾ? ಅವರೇ ಮಾಡಿದ್ದಾರೆ ಅಂತಾ ಯಾರಾದರೂ ಹೇಳಿದ್ರಾ? ಈ ರಾಜ್ಯದಲ್ಲಿ ಮಹಾ ನಾಯಕರು ಬಹಳ ಜನ ಇದ್ದಾರೆ. ಬಿಜೆಪಿ ಒಳಗೆ ಒಬ್ಬ ಮಹಾನಾಯಕರು ಬೆಳೆಯುತ್ತಿದ್ದಾರೆ. ಅಂತಹದರಲ್ಲಿ ಡಿ ಕೆ ಶಿವಕುಮಾರ್ ಏಕೆ ತಮ್ಮ ಹೆಸರನ್ನು ತಾವೇ ಈ ಪ್ರಕರಣದಲ್ಲಿ ಸಿಲುಕಿಸಿಕೊಂಡರೋ ಗೊತ್ತಿಲ್ಲ ಎಂದರು.