

ಮೈಸೂರು: ನಗರದ ಅಂಬಾವಿಲಾಸ ಅರಮನೆ ಆವರಣದಲ್ಲಿರುವ ಶ್ರೀ ತ್ರಿನೇಶ್ವರ ದೇವಾಲಯದಲ್ಲಿ ಗುರುವಾರ ಶಿವರಾತ್ರಿ ಪ್ರಯುಕ್ತ 11 ಕೆ.ಜಿ. ತೂಕದ ಚಿನ್ನದ ಕೊಳಗ (ಮುಖವಾಡ)ವನ್ನು ಪೂಜಾ ವಿಧಿವಿಧಾನದೊಂದಿಗೆ ಶಿವಲಿಂಗಕ್ಕೆ ಧರಿಸಲಾಯಿತು.
ಬೆಳಗ್ಗೆ 5 ರಿಂದ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನ ಪ್ರಾರಂಭಗೊಂಡಿತು. ಮಹಾಭಿಷೇಕದ ಬಳಿಕ ಬೆಳಗ್ಗೆ 6ಕ್ಕೆ ಶಿವನಿಗೆ ಕೊಳಗ ಧಾರಣೆ ಮಾಡಲಾಯಿತು. ದೇವಾಲಯದಲ್ಲಿ ಬೆಳಗ್ಗಿನಿಂದ ಅರ್ಚನೆ, ಅಭಿಷೇಕ ನಡೆಯಿತು. ಶುಕ್ರವಾರ ಬೆಳಗ್ಗಿನ ಜಾವ 4ರವರೆಗೆ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ. ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಒಡೆಯರ್ ತ್ರಿನೇಶ್ವರ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.