ಮೈಸೂರಿನಲ್ಲಿರುವುದೆಲ್ಲ ಹಸಿರು ಪಟಾಕಿ: ನಿಶ್ಚಿತೆಯಿಂದ ಖರೀದಿಸಲು ವರ್ತಕರ ಮನವಿ

pataki
Published on

ಮೈಸೂರು: ನಗರಕ್ಕೆ ಪೂರೈಕೆಯಾಗಿರುವ ಶೇ.90 ರಷ್ಟು ಪಟಾಕಿಗಳು ಪರಿಸರ ಸ್ನೇಹಿಯಾಗಿರುವ ‘ಹಸಿರು ಪಟಾಕಿ’ಗಳಾಗಿದ್ದು, ಸಾರ್ವಜನಿಕರು ಗೊಂದಲಕ್ಕೆ ಒಳಗಾಗದೆ ಖರೀದಿ ಮಾಡಬೇಕೆಂದು ಹೆಬ್ಬಾಳು ಕೈಗಾರಿಕಾ ಪ್ರದೇಶ ಪಟಾಕಿ ವರ್ತಕರ ಸಂಘದ ಸದಸ್ಯ ಹರೀಶ್ ಮನವಿ ಮಾಡಿದರು.

ಈ ಬಾರಿ ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಜನರಲ್ಲಿ ಗೊಂದಲ ಉಂಟಾಗಿದೆ. ನಗರಕ್ಕೆ 2019ರಿಂದಲೇ ಹಸಿರು ಪಟಾಕಿ ಪೂರೈಕೆಯಾಗುತ್ತಿದೆ. ಹೀಗಾಗಿ ನಿಶ್ಚಿಂತೆಯಿಂದ ಜನರು ನಗರದಲ್ಲಿ ಪಟಾಕಿಗಳನ್ನು ಖರೀದಿ ಮಾಡಬಹುದೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಟಾಕಿಯಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದ ಸಂದರ್ಭ ಸುಪ್ರಿಂಕೋರ್ಟ್ ನಿರ್ದೇಶನ ಮೇರೆಗೆ ವಾಯುಮಾಲಿನ್ಯದ ಪ್ರಮಾಣ ಅಳೆಯಲಾಯಿತು. ಆ ಸಂದರ್ಭ ಒಟ್ಟು ವಾಯು ಮಾಲಿನ್ಯದ ಪೈಕಿ ಶೇ.4 ರಷ್ಟು ವಾಯು ಮಾಲಿನ್ಯ ಪಟಾಕಿಯಿಂದ ಉಂಟಾಗುತ್ತಿರುವುದು ಕಂಡು ಬಂತು. ಈ ಹಿನ್ನೆಲೆಯಲ್ಲಿ ಪಟಾಕಿಯಿಂದ ಉಂಟಾಗುತ್ತಿರುವ ವಾಯುಮಾಲಿನ್ಯ ತಗ್ಗಿಸಲು ಹಸಿರು ಪಟಾಕಿ ತಯಾರಿಸಲು 2019ರಲ್ಲಿ ಚಾಲನೆ ದೊರೆಯಿತು. ಈ ಹಿಂದಿನ ಪಟಾಕಿಗೆ ಹೋಲಿಸಿದರೆ ನೂತನ ಹಸಿರು ಪಟಾಕಿಯಿಂದ ಉಂಟಾಗುವ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಅತ್ಯಂತ ಕಡಿಮೆಯಾಗಿದ್ದು, ಶೇ.30 ರಿಂದ 40 ರಷ್ಟು ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಕಡಿಮೆಯಾಗಿದೆ. ಈ ಹಿಂದೆ ಪಟಾಕಿಗೆ ತಯಾರಿಕೆಗೆ ಬಳಸುತ್ತಿದ್ದ ರಾಸಾಯನಿಕ ಪದಾರ್ಥ ಹಾಗೂ ಹಸಿರು ಪಟಾಕಿ ತಯಾರಿಕೆಗೆ ಬಳಸುತ್ತಿರುವ ರಾಸಾಯನಿಕ ಪದಾರ್ಥಗಳು ಭಿನ್ನವಾಗಿದೆ ಎಂದರು.

ದೇಶದಲ್ಲಿ ಪಟಾಕಿಗಳು ಶೇ.90 ರಷ್ಟು ತಯಾರಾಗುವುದು ಗುಡಿಕೈಗಾರಿಕೆಗಳಲ್ಲಿ. ಗುಡಿಕೈಗಾರಿಕೆಗಳನ್ನು ನಡೆಸುವವರ ಬಳಿ ಹೆಚ್ಚು ಹಣ ಇರುವುದಿಲ್ಲ. ಇರುವ ಅತ್ಯಲ್ಪ ಹಣವನ್ನು ಒಟ್ಟುಗೂಡಿಸಿ ಅವರು ಪಟಾಕಿಗೆ ಬೇಕಾದ ಪೇಪರ್, ಕವರ್‌ಗಳನ್ನು ಬೇರೆಡೆ ಮುದ್ರಿಸು ತ್ತಾರೆ. 2018 ಮತ್ತು 2019ರ ಅವಧಿಯಲ್ಲಿ ಈ ರೀತಿ ಮುದ್ರಿಸಿದ ಸಾಕಷ್ಟು ಪಟಾಕಿಗಳಲ್ಲಿ ‘ಹಸಿರು ಪಟಾಕಿ’ ಎಂದು ಬರೆದಿಲ್ಲ. ವಾಸ್ತವ ವಾಗಿ ಪಟಾಕಿಯ ಕವರ್‌ಗಳು ಮಾತ್ರ ಹಳೆಯದಾಗಿದ್ದು, ಅದರಲ್ಲಿ ಮದ್ದುಗಳನ್ನು ಹಸಿರು ಪಟಾಕಿಯ ಮಾನದಂಡಕ್ಕೆ ಅನುಗುಣ ವಾಗಿ ತುಂಬಲಾಗಿದೆ. ಹೀಗಾಗಿ ಪರಿಸರಕ್ಕೆ ಈ ಪಟಾಕಿಗಳಿಂದ ಹೆಚ್ಚಿನ ಹಾನಿ ಉಂಟಾಗುವುದಿಲ್ಲ. ಈ ಪಟಾಕಿಗಳ ಮಾರಾಟಕ್ಕೆ ಅವಕಾಶ ನೀಡಬೇಕು. ಕವರ್‌ನಲ್ಲಿ ಹಸಿರು ಪಟಾಕಿ ಎಂದು ಬರೆದಿಲ್ಲ ಎಂಬ ಕಾರಣಕ್ಕೆ ಪಟಾಕಿ ಮಾರಾಟಕ್ಕೆ ಅವಕಾಶ ನೀಡದೆ ಇರುವುದು ಸರಿಯಲ್ಲ. ಈ ಬಾರಿ ಪಟಾಕಿ ಮಾರಾಟಕ್ಕೆ ವಿನಾಯಿತಿ ನೀಡಿ ಮುಂದಿನ ಬಾರಿಯಿಂದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಿ ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಮಣಿಕಂಠ, ಆನಂದ, ರವಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net