ಚಾಮುಂಡೇಶ್ವರಿ ದೇವಸ್ಥಾನದ ಹುಂಡಿ ಎಣಿಕೆ: ಕರೊನಾ ಸಂಕಷ್ಟದಲ್ಲೂ ಅಕ್ಟೋಬರ್‌ನಲ್ಲಿ 65 ಲಕ್ಷ ರೂ. ಸಂಗ್ರಹ

chamundeshwari temple
Published on

ಮೈಸೂರು: ಕರೊನಾ ಸಂಕಷ್ಟದ ನಡುವೆಯೂ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಅಕ್ಟೋಬರ್ ತಿಂಗಳಿನಲ್ಲಿ ಭಕ್ತಾದಿಗಳು ಉತ್ತಮ ಕಾಣಿಕೆ ನೀಡಿದ್ದು, ಹುಂಡಿ ಎಣಿಕೆಯಲ್ಲಿ 65,61,229 ರೂ. ಸಂಗ್ರಹವಾಗಿದೆ.

ಕರೊನಾ ಹಿನ್ನೆಲೆಯಲ್ಲಿ ಭಾನುವಾರ ಬೆಟ್ಟಕ್ಕೆ ಭಕ್ತಾದಿಗಳು ತೆರಳಲು ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ, ಅಕ್ಟೋಬರ್ ತಿಂಗಳಿನಲ್ಲಿ ದಸರಾ ಉತ್ಸವದ ಉದ್ಘಾಟನೆ ಹಿನ್ನೆಲೆಯಲ್ಲಿ ಎರಡು ದಿನ ಬೆಟ್ಟಕ್ಕೆ ಭಕ್ತಾದಿಗಳು ತೆರಳುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈ ಎಲ್ಲದರ ನಡುವೆಯೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಹುಂಡಿಗೆ ದೊಡ್ಡ ಮೊತ್ತದ ಹಣವನ್ನು ನೀಡಿದ್ದಾರೆ.

500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದು, ಹೀಗಿದ್ದರೂ ಕೆಲವರು ನಿಷೇಧಿತ ನೋಟುಗಳನ್ನು ಇಟ್ಟುಕೊಂಡಿದ್ದಾರೆ. ಆದರೆ, ಆ ನೋಟುಗಳನ್ನು ಚಲಾವಣೆ ಮಾಡಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ದೇವರ ಹುಂಡಿಗೆ ಹಾಕುತ್ತಿದ್ದಾರೆ. ಹುಂಡಿ ಎಣಿಕೆ ಸಂದರ್ಭ ಒಟ್ಟು 500 ರೂ. ಮುಖಬೆಲೆಯ 5 ನೋಟುಗಳು ಪತ್ತೆಯಾಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net